ನೂಪುರ್ ಶರ್ಮ ವಿರುದ್ಧ ಸುಪ್ರೀಂ ಕಟುಟೀಕೆ- ಎಲ್ಲ ಎಫ್ಐಆರ್ ಗಳ ಏಕೀಕೃತ ವಿಚಾರಣೆಗೆ ನಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾದಿ ಕುರಿತಾಗಿ ತಾವು ನೀಡಿದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ದೇಶ ವಿವಿಧ ಭಾಗಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ನೂಪುರ್‌ ಶರ್ಮಾ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರವಾದಿ ಕುರಿತಾಗಿ ನೂಪುರ್‌ ನೀಡಿದ್ದ ಹೇಳಿಕೆ ಗೊಂದಲಕಾರಿ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಆಕೆಯ ಹೇಳಿಕೆಗಳು ಅಕ್ಷೇಪಾರ್ಹ. ಸ್ವತಃ ಓರ್ವ ವಕೀಲೆಯಾದ ನೂಪುರ್‌ ಶರ್ಮಾ ಅವರಿಂದ ಇಂತಹದ್ದೊಂದು ಹೇಳಿಕೆ ಬರಬಾರದಿತ್ತು,  ಆಕೆ ತನ್ನ ಹೇಳಿಕೆಗೆ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರಿದ್ದ ಪೀಠವು ಆದೇಶಿಸಿದೆ.
ಶರ್ಮಾ ಹೇಳಿಕೆ ದೇಶದಲ್ಲಿ ದುರಾದೃಷ್ಟಕರ ಘಟನೆಗಳಿಗೆ ಕಾರಣವಾಗಿದೆ. ಜನರ ಭಾವನೆಗಳನ್ನು ಪ್ರಚೋದಿಸಿದೆ. ಇಂತಹ ಹೇಳಿಕೆಯಿಂದ ಏನನ್ನು ಸಾಧಿಸಲು ಹೊರಟಿದ್ದೀರಿ?. ಇಂತಹ ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡುವ ಮುನ್ನ ಶರ್ಮಾ ಯೋಚಿಸಬೇಕಿತ್ತು ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
ಈ ರೀತಿಯ ಚರ್ಚೆಯನ್ನು ಆಯೋಜಿಸಿದ್ದಕ್ಕಾಗಿ ಟಿವಿ ಚಾನೆಲ್ ವಿರುದ್ಧ ಪೀಠವು ಕೆಂಡಾಮಂಡಲವಾಗಿದೆ. ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಜ್ಞಾನವಾಪಿ ಮಸೀದಿಯ ವಿಚಾರವಾಗಿ ಚರ್ಚೆ ನಡೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. “ಟಿವಿ ಚರ್ಚೆ ಯಾವ ಉದ್ದೇಶಕ್ಕಾಗಿ? ಅವರು ಅಂತಹ ವಿವಾದಾತ್ಮಕ ವಿಷಯವನ್ನು ಏಕೆ ಚರ್ಚೆಗೆ ಆರಿಸಿಕೊಂಡರು,” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಶರ್ಮಾ ವಿರುದ್ಧದ ಎಫ್‌ಐಆರ್‌ ದಾಖಲಾದರೂ ದೆಹಲಿ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದಕ್ಕಾಗಿ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ. ತನ್ನ ವಿರುದ್ಧ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನೂ ದೆಹಲಿಗೆ ಹಸ್ತಾಂತರಿಸಿ ವಿಚಾರಣೆ ಅಲ್ಲೇ ನಡೆಸಬೇಕು ಎಂದು ನೂಪುರ್‌ ಶರ್ಮಾ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಅರ್ಜಿ ಹಿಂಪಡೆಯಲು ಕಾಲಾವಕಾಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!