ಸಂಭಾಲ್ ಶಾಹಿ ಜಾಮಾ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಉತ್ತರ ಪ್ರದೇಶದ ಸಂಬಾಲ್‌ನಲ್ಲಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ತೆರಳುವಂತೆ ಜಾಮಾ ಮಸೀದಿಯ ಶಾಹಿ ಈದ್ಗಾ ಸಮಿತಿಗೆ ಸುಪ್ರೀಂ ಕೋರ್ಟ್ ಇಂದು ಸೂಚಿಸಿದೆ. ಜೊತೆಗೆ ಈದ್ಗಾ ಸಮಿತಿಯು ಹೈಕೋರ್ಟ್‌ಗೆ ತೆರಳುವವರೆಗೆ ಮಸೀದಿ ಸರ್ವೆ ಪ್ರಕರಣವನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಶುಕ್ರವಾರ ಹೇಳಿದೆ.

ಮಸೀದಿಯ ಸರ್ವೆ ಕಾರ್ಯಕ್ಕೆ ವಿಚಾರಣಾ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಸಂಭಾಲ್ ಶಾಹಿ ಜಾಮಾ ಮಸೀದಿ ಸಮಿತಿ ಸಲ್ಲಿಸಿದ್ದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತು.
ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ ಸಂಜಯ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಮಸೀದಿಯ ಸಮೀಕ್ಷೆಯನ್ನು ನಡೆಸಿದ ಆಯುಕ್ತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಡಬೇಕು. ಮುಂದಿನ ಆದೇಶ ಬರುವವರೆಗೆ ವರದಿಯನ್ನು ತೆರೆಯಬಾರದು ಎಂದು ನ್ಯಾಯಪೀಠ ಹೇಳಿತು.

ಸದ್ಯಕ್ಕೆ ಸಂಭಾಲ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕು. ಅದಕ್ಕಾಗಿ ಕ್ರಮವನ್ನು ಕಾಯ್ದರಿಸುತ್ತೇವೆ. ಸಮೀಕ್ಷೆ ಆಗಬಾರದು ಎಂದಲ್ಲ. ಆದ್ರೆ ಸದ್ಯಕ್ಕೆ ಸಂಪೂರ್ಣವಾಗಿ ತಟಸ್ಥರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಹಾಗಾಗಿ ಜನವರಿ 8ರ ವರೆಗೆ ಯಾವುದೇ ಆದೇಶ ಪ್ರಕಟಿಸದಂತೆ ಎಂದು ಕೋರ್ಟ್‌ ತಿಳಿಸಿದೆ.

ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯದ ಆದೇಶವು ಈ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು ಎಂಬ ಅರ್ಜಿದಾರರ ಹಕ್ಕುಗಳ ಆಧಾರದ ಮೇಲೆ ಮಸೀದಿಯ ಸಮೀಕ್ಷೆಯನ್ನು ಕಡ್ಡಾಯಗೊಳಿಸಿತ್ತು. ಮುಂದಿನ ವಿಚಾರಣೆಯನ್ನು ಮುಂದೂಡಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!