ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ಹರಿಸುವ ವಿಚಾರಕ್ಕೆ ಕುರಿತಂತೆ ಇಂದು ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ.
ಕರ್ನಾಟಕವು ಕಾವೇರಿ ನೀರನ್ನು ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಇತ್ತ ಕಾವೇರಿ ಕಣಿವೆ ಪ್ರದೇಶದಲ್ಲಿ ಶೇ 57ರಷ್ಟು ಮಳೆ ಕೊರತೆಯಾಗಿದೆ. ಇದರಿಂದಾಗಿ ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ಹಾಗಾಗಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕಷ್ಟವಾಗಲಿದೆ ಎಂದು ವಾದ ಮಂಡಿಸಲು ಕರ್ನಾಟಕ ಸರ್ಕಾರವು ಸಿದ್ದತೆ ಮಾಡಿಕೊಂಡಿದೆ.
ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಕರ್ನಾಟಕವು ಪ್ರತಿದಿನ ಮುಂದಿನ ಹದಿನೈದು ದಿನಗಳಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತ್ತು. CWMA ಆದೇಶಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. 5 ಸಾವಿರ ಕ್ಯೂಸೆಕ್ ನೀರು ಸಾಲುವುದಿಲ್ಲ. 24 ಸಾವಿರ ಕ್ಯೂಸೆಕ್ ನೀರು ಬೇಕು ಎಂದು ಒತ್ತಡ ಹೇರಿತ್ತು. ಆದರೆ ಇದಕ್ಕೆ CWMA ಒಪ್ಪಿಗೆ ನೀಡಿರಲಿಲ್ಲ. ಇದೀಗ ಸುಪ್ರಿಂಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುಂತೆ ಕೋರಿ ವಾದ ಮಂಡಿಸಲಿದೆ.