ಹೊಸದಿಗಂತ ವರದಿ ಮಂಗಳೂರು:
ಇಲ್ಲಿನ ಸುರತ್ಕಲ್ ಸಮೀಪ ಇದ್ದ ಟೋಲ್ ಸಂಗ್ರಹ ಕೇಂದ್ರವನ್ನು ಕೇಂದ್ರ ಸರಕಾರ ರದ್ದು ಪಡಿಸಿದೆ.
ಸುರತ್ಕಲ್ ಟೋಲ್ ಕೇಂದ್ರ ಸ್ಥಗಿತಕ್ಕೆ ಈ ಹಿಂದಿನಿಂದಲೂ ವಿರೋಧ ವ್ಯಕ್ತವಾಗಿದ್ದು, ಸಂಸದ ನಳಿನ್ ಕುಮಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಗಮನಸೆಳೆದಿದ್ದರು. ಇದೀಗ ಅಧಿಕೃತವಾಗಿ ಕೇಂದ್ರ ಸರಕಾರ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ರದ್ದುಪಡಿಸಿದೆ.
‘ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ರದ್ದುಪಡಿಸಿದ್ದಾರೆ. ನಿತಿನ್ ಗಡ್ಕರಿಯವರು ಈ ಹಿಂದೆಯೇ ಈ ಕೇಂದ್ರವನ್ನು ರದ್ದುಪಡಿಸುವ ಭರವಸೆ ನೀಡಿದ್ದರು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗಿತ್ತು. ಈಗ ಈ ಕೇಂದ್ರ ರದ್ದಾಗಿದ್ದು,ಜನತೆಯ ಬೇಡಿಕೆಗೆ ಸ್ಪಂದನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.