ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ರಾಜಕೀಯ ಬಿಕ್ಕಟ್ಟಿನ ನಡುವೆಯೇ ತಮ್ಮ ಬೆಂಬಲಿಗರೊಂದಿಗೆ ರೆಸಾರ್ಟ್ ಗೆ ತೆರಳಿದ್ದ ಸಿಎಂ ಹೇಮಂತ್ ಸೂರೆನ್ ಅವರು ಜಾಲಿಯಾಗಿ ದೋಣಿ ವಿಹಾರ ಮಾಡುತ್ತಿರುವ ಫೋಟೊಗಳು ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಸೋರೆನ್ ಅವರ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಮೈತ್ರಿ ಪಾಲುದಾರ ಕಾಂಗ್ರೆಸ್‌ನ ಹಲವಾರು ಶಾಸಕರು ಅವರೊಂದಿಗೆ ಇದ್ದಾರೆ. ಹರ್ಷಚಿತ್ತದಿಂದ ಕಿತ್ತಳೆ ಬಣ್ಣದ ಲೈಫ್ ಜಾಕೆಟ್‌ಗಳನ್ನು ಧರಿಸಿ, ಜಾರ್ಖಂಡ್ ಸಿಎಂ ಮತ್ತು ಶಾಸಕರು ಮುಖದಲ್ಲಿ ನಗುವಿನೊಂದಿಗೆ ಥಂಬ್ಸ್ ಅಪ್ ಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ. ರಾಜ್ಯದ ಖುಂಟಿ ಜಿಲ್ಲೆಯ ಲಟ್ರಟು ಅಣೆಕಟ್ಟಿನ ಬಳಿ ವಿರಾಮವಾಗಿ ದೋಣಿ ವಿಹಾರ ಮಾಡಿರುವ ಫೋಟೊಗಳು ಹರಿದಾಡುತ್ತಿವೆ. ಕುದುರೆ ವ್ಯಾಪಾರದಿಂದ ಅವರನ್ನು ರಕ್ಷಿಸಲು ರೆಸಾರ್ಟ್ ಗೆ ಕರೆದೊಯ್ಯಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಲಾಭದಾಯಕ ಹುದ್ದೆಯ ಆರೋಪದ ಮೇಲೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆಯನ್ನು ಎದುರಿಸುತ್ತಿರುವ ಹೇಮಂತ್ ಸೋರೆನ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಸಸ್ಪೆನ್ಸ್ ಇರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಆದರೆ ಎಲ್ಲಾ ಶಾಸಕರು ಲಟ್ರಟು ಅಣೆಕಟ್ಟು ಮತ್ತು ಸಮೀಪದ ಅತಿಥಿ ಗೃಹದಲ್ಲಿ ಸಮಯ ಕಳೆದು ಸಂಜೆಯ ವೇಳೆಗೆ ರಾಜ್ಯ ರಾಜಧಾನಿಗೆ ಮರಳಿದ್ದಾರೆ ಎನ್ನಲಾಗಿದೆ.