ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು, ದಿನಕ್ಕೊಂದು ವೈರಲ್ ವಿಡಿಯೋ ಕಣ್ಣಿಗೆ ಬೀಳುತ್ತಿರುತ್ತದೆ. ಆದ್ರೆ ಇತ್ತೀಚೆಗೆ ನೇಪಾಳದಿಂದ ಬಂದ ಒಂದು ವಿಡಿಯೋ ಮಾತ್ರ ಜನರ ಕಣ್ಣು ಅಗಲಿಸುವಂತೆ ಮಾಡಿದೆ! ಬೆಟ್ಟ-ಗುಡ್ಡಗಳ ಮಧ್ಯೆ ಭೀಕರ ಪ್ರವಾಹ… ರಭಸವಾಗಿ ಹರಿದು ಬರ್ತಿರೋ ಕೆಸರು ನೀರು, ರಾಕ್ಷಸ ಗಾತ್ರದ ಕಲ್ಲು-ಬಂಡೆಗಳು, ಬೇರು ಸಹಿತ ಕಿತ್ತುಬಂದ ದೊಡ್ಡ ದೊಡ್ಡ ಮರಗಳು! ಕಣ್ಣೆದುರೇ ದೊಡ್ಡ ದೊಡ್ಡ ಕಟ್ಟಡಗಳು ಪತ್ತೇ ಇಲ್ಲದಂತೆ ಕೊಚ್ಚಿಕೊಂಡು ಹೋಗುತ್ತಿದ್ದರೆ, ಅಲ್ಲೊಂದು ಪುಟ್ಟ ‘ಹಸಿರು ಬಣ್ಣದ ಮನೆ’ ಮಾತ್ರ ಯಾವುದಕ್ಕೂ ಕೇರ್ ಮಾಡದೆ ಜಗ್ಗದೇ, ಕುಗ್ಗದೇ ಕಲ್ಲು ಬಂಡೆಯಂತೆ ನಿಂತಿತ್ತು! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಮೂರು ಮಿಲಿಯನ್‌ಗೂ ಹೆಚ್ಚು ಜನ ನೋಡಿ ದಂಗಾಗಿದ್ದಾರೆ.

ಫುಲ್ ಫ್ಯಾಮಿಲಿ ಸೇಫ್
ಆ ಮನೆಯ ಬಾಲ್ಕನಿಯಲ್ಲಿ ಇಡೀ ಕುಟುಂಬ ಭಯದಿಂದ ನಡುಗುತ್ತಾ ನಿಂತಿತ್ತು. ಪ್ರವಾಹದ ಅಬ್ಬರ ನೋಡಿ ಎಲ್ಲರೂ ‘ಅಯ್ಯೋ ಈ ಮನೆ ಕಥೆ ಮುಗೀತು, ಒಳಗಿರೋರು ಸತ್ತೇ ಹೋದ್ರು’ ಅಂತಾನೇ ಅಂದುಕೊಂಡಿದ್ರು. ಆದರೆ ವಿಚಿತ್ರ ಅಂದ್ರೆ, ಆ ಮನೆಗೆ ಒಂದು ಚೂರು ಹಾನಿ ಆಗಲಿಲ್ಲ, ಒಳಗಿದ್ದ ಕುಟುಂಬದವರು ಸೇಫ್ ಆಗಿ ಬದುಕುಳಿದ್ರು.
ಈ ವಿಡಿಯೋ ನೋಡಿ ನೆಟ್ಟಿಗರೆಲ್ಲ ತಲೆ ಕೆರೆದುಕೊಳ್ಳೋಕೆ ಶುರು ಮಾಡಿದ್ರು. ‘ಅಷ್ಟೊಂದು ದೊಡ್ಡ ದೊಡ್ಡ ಮನೆಗಳೇ ಕೊಚ್ಚಿಕೊಂಡು ಹೋದವು, ಈ ಸಣ್ಣ ಮನೆ ಹೆಂಗೆ ಉಳೀತು?’ ಎಂದು ಎಲ್ಲರೂ ಪ್ರಶ್ನೆ ಕೇಳೋಕೆ ಶುರು ಮಾಡಿದ್ರು. ಈಗ ಇದಕ್ಕೆ ಉತ್ತರ ನಾವ್ ಕೊಡ್ತೀವಿ ನೋಡಿ..
ಇದು ಬರೀ ಅದೃಷ್ಟ ಅಲ್ಲ
ಆರ್ಕಿಟೆಕ್ಚರ್ ಎಕ್ಸ್‌ಪರ್ಟ್ಸ್ ಪ್ರಕಾರ, ಈ ಮನೆ ಉಳಿದಿದ್ದು ಬರಿ ಅದೃಷ್ಟದಿಂದ ಅಲ್ಲ, ಅದರ ಹಿಂದಿರೋ ‘ತಂತ್ರಜ್ಞಾನ’ ಮತ್ತು ‘ಬುದ್ಧಿವಂತಿಕೆ’ಯಿಂದ.
RCC ಕನ್‌ಸ್ಟ್ರಕ್ಷನ್ ಪವರ್
ನೇಪಾಳದ ಕಡೆ ಹೆಚ್ಚಾಗಿ ಕಲ್ಲು-ಮಣ್ಣು ಬಳಸಿ ಮನೆ ಕಟ್ಟುತ್ತಾರೆ. ಅವು ಮೇಲಿಂದ ಬೀಳೋ ಭಾರವನ್ನು ತಡೆಯುತ್ತವೆ ಹೊರತು, ಪಕ್ಕದಿಂದ ರಭಸವಾಗಿ ಬರೋ ಪ್ರವಾಹದ ಏಟನ್ನು ತಡೆಯಲ್ಲ. ಆದರೆ ಈ ಹಸಿರು ಮನೆಗೆ ‘ರಿಇನ್‌ಫೋರ್ಸ್ಡ್ ಕಾಂಕ್ರೀಟ್ ಫ್ರೇಮ್’ ಬಳಸಿ ಕಟ್ಟಲಾಗಿತ್ತು. ಅಂದ್ರೆ ಕಬ್ಬಿಣದ ರಾಡ್‌ಗಳು, ಪಿಲ್ಲರ್‌ಗಳು ಮತ್ತು ಬೀಮ್‌ಗಳನ್ನು ಒಂದಕ್ಕೊಂದು ಗಟ್ಟಿಯಾಗಿ ಕನೆಕ್ಟ್ ಮಾಡಲಾಗಿತ್ತು. ಪ್ರವಾಹ ಬಂದು ಜೋರಾಗಿ ಅಪ್ಪಳಿಸಿದಾಗ, ಆ ಭೀಕರ ಏಟಿನ ಶಕ್ತಿಯನ್ನು ಈ ಪಿಲ್ಲರ್‌ಗಳು ಭೂಮಿಗೆ ವರ್ಗಾಯಿಸಿದವು. ಹಾಗಾಗಿ ಗೋಡೆಗಳು ಬಿರುಕು ಬಿಡಲಿಲ್ಲ.

ಜಾಗವೇ ಪ್ಲಸ್ ಪಾಯಿಂಟ್
ಇನ್ನೊಂದು ಮೇನ್ ಪಾಯಿಂಟ್ ಅಂದ್ರೆ ಮನೆ ಕಟ್ಟಿದ ಜಾಗ. ಪ್ರವಾಹದ ಮೇನ್ ರಸ್ತೆಯಲ್ಲೇ ಈ ಮನೆ ಇರಲಿಲ್ಲ. ದೊಡ್ಡ ದೊಡ್ಡ ಬಂಡೆಕಲ್ಲುಗಳು ತಗ್ಗಿನ ಜಾಗದಲ್ಲಿ ನುಗ್ಗಿಕೊಂಡು ಹೋದರೆ, ಈ ಮನೆ ಸ್ವಲ್ಪ ಎತ್ತರದ ಜಾಗದಲ್ಲಿ ಇತ್ತು. ಜೊತೆಗೆ ಮನೆಯ ಆಕಾರ ಚಿಕ್ಕದಾಗಿದ್ದರಿಂದ ಹರಿದು ಬಂದ ನೀರು ಮತ್ತು ಮಣ್ಣು ಮನೆಗೆ ಡಿಕ್ಕಿ ಹೊಡೆಯುವ ಬದಲು ಎರಡು ಕಡೆ ಸ್ಪ್ಲಿಟ್ ಆಗಿ ಹರಿಯಿತು. ಆಮೇಲೆ ಶೇಖರಣೆಯಾದ ಮಣ್ಣೇ ಒಂದು ತಡೆಗೋಡೆಯಂತಾಗಿ, ಆಮೇಲೆ ಬಂದ ಪ್ರವಾಹದ ಅಲೆಗಳು ಆ ಇಳಿಜಾರಿನ ಮೇಲಿಂದ ಮನೆಯನ್ನು ಮುಟ್ಟದೇ ಪಕ್ಕಕ್ಕೆ ಹರಿದು ಹೋದವು.
ಇಷ್ಟಕ್ಕೂ ಈ ಘಟನೆ ನಮಗೆ ಕಲಿಸುವ ದೊಡ್ಡ ಪಾಠವೆಂದರೆ.. ಮನೆ ಕಟ್ಟುವಾಗ ಮಾಡುವ ಸಣ್ಣ ಹೆಜ್ಜೆಯ ಮುನ್ನೆಚ್ಚರಿಕೆ ಮತ್ತು ಸರಿಯಾದ ಇಂಜಿನಿಯರಿಂಗ್ ನಿರ್ಧಾರ, ನಾಳೆ ಎಂಥದ್ದೇ ಮಹಾದುರಂತ ಎದುರಾದರೂ ಒಂದು ಇಡೀ ಕುಟುಂಬದ ಜೀವ ಉಳಿಸುವ ರಕ್ಷಾ ಕವಚವಾಗುತ್ತದೆ. ಆಧುನಿಕ ವಿಜ್ಞಾನ ಮತ್ತು ಪ್ರಕೃತಿಯ ತಿಳುವಳಿಕೆ ಒಂದಾದರೆ ಸಾವನ್ನೂ ಗೆದ್ದು ನಿಲ್ಲಬಹುದು ಎಂಬುದನ್ನು ಈ ಮನೆ ಇಡೀ ಜಗತ್ತಿಗೆ ಸಾರಿದೆ.



