ಹೊಸದಿಗಂತ ವರದಿ, ಕುಶಾಲನಗರ:
ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಹಾರಂಗಿಯಿಂದ ಕಣಿವೆವರೆಗಿನ ಮುಖ್ಯ ನಾಲೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಎಡ ದಂಡೆಯ ಮುಖ್ಯ ನಾಲೆಯ ದುರಸ್ತಿ ಕಾರ್ಯ ಕಾವೇರಿ ನೀರಾವರಿ ನಿಗಮದ ವತಿಯಿಂದ ನಡೆಯಲಿದ್ದು, ಈ ಸಂಬಂಧ ಡ್ರೋನ್ ಕ್ಯಾಮರಾದ ಮೂಲಕ ಸರ್ವೆ ಕಾರ್ಯ ಆರಂಭವಾಗಿದೆ.
ಹಾರಂಗಿ ಅಚ್ಚುಕಟ್ಟು ಉಪ ವಿಭಾಗ ಹುಲಗುಂದ ವ್ಯಾಪ್ತಿಯಲ್ಲಿ ಬರುವ ಹಾರಂಗಿಯ 1ರಿಂದ 18ನೇ ತೂಬಿನವರೆಗಿನ ವಿತರಣೆ ನಾಲೆಗಳಲ್ಲಿ 15 ಕಿಲೋ ಮೀಟರ್ ಹಾರಂಗಿ ನಾಲೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ನಾಲೆ ದುರಸ್ತಿಗೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅವರಿಗೆ ಕಳೆದ ಮೂರು ತಿಂಗಳ ಹಿಂದೆ ಮನವಿ ಸಲ್ಲಿಸಿ ದುರಸ್ತಿಗೆ ಒತ್ತಾಯಿಸಿದ್ದರು.
ಅದರನ್ವಯ ಶಾಸಕರು ರಾಜ್ಯ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಿಗೆ ಪತ್ರ ಬರೆದಿದ್ದು, ಅದಕ್ಕೆ ಸ್ಪಂದಿಸಿರುವ ಸಚಿವ ಗೋವಿಂದ ಕಾರಜೋಳ ಅವರು, ಕಾವೇರಿ ನೀರಾವರಿ ನಿಗಮದ ಮೂಲಕ ದುರಸ್ತಿ ಕಾರ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ್ದರು.
ಅದರಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಈಗಾಗಲೇ ಹಾರಂಗಿಯಿಂದ 1ರಿಂದ 18 ನೇ ತೂಬಿನವರೆಗೆ ಮುಖ್ಯ ನಾಲೆಯ ಎರಡು ಕಡೆಗಳ ಲೈನಿಂಗ್ ದುರಸ್ತಿ ನಡೆಸುವ ಬಗ್ಗೆ ಡ್ರೋನ್ ಕ್ಯಾಮರಾ ಮೂಲಕ ಸಮಗ್ರವಾದ ಚಿತ್ರಣ ಮತ್ತು ನಾಲೆ ವ್ಯಾಪ್ತಿಯ ಎರಡೂ ಕಡೆಗಳಿಗೆ ಸೇರಿದ ಜಾಗದ ಒತ್ತುವರಿ ಮಾಹಿತಿಗಳ ಸಂಗ್ರಹ ಆರಂಭಗೊಂಡಿದೆ.
ನಾಲೆ ನಿರ್ಮಾಣಗೊಂಡು ಅನೇಕ ವರ್ಷಗಳು ಕಳೆದಿದ್ದು, ಕೊಡಗು ಜಿಲ್ಲೆ ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯ 54,591 ಹೆಕ್ಟೇರ್ ಪ್ರದೇಶದ ಬೇಸಾಯಕ್ಕೆ ನೀರು ಒದಗಿಸಲಾಗುತ್ತಿದೆ. ಇದರಲ್ಲಿ 15 ಕಿ.ಮೀ ದೂರದವರೆಗಿನ ಮೊದಲ ಹಂತದ ನಾಲೆ ದುರಸ್ತಿ ಮಾಡುವ ಯೋಜನೆ ಇದ್ದಾಗಿದೆ.
ಸರ್ವೆ ಪೂರ್ಣಗೊಂಡ ನಂತರ ದುರಸ್ತಿ ಕಾರ್ಯಕ್ಕೆ ಬೇಕಾಗುವ ಅನುದಾನ ಇಲಾಖೆಯ ನಿಯಮನುಸಾರವಾಗಿ ಬಿಡುಗಡೆಗೊಳ್ಳಲಿರುವುದಾಗಿ ಹೇಳಲಾಗಿದೆ. ಅದರಂತೆ ಮುಂದಿನ ಡಿಸೆಂಬರ್ ಅಂತ್ಯದ ಒಳಗೆ ಟೆಂಡರ್ ಪ್ರಕ್ರಿಯೆ ನಡೆದು ದುರಸ್ತಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ