April 25, 2026
Saturday, April 25, 2026
spot_img

ಸೂರ್ಯವಂಶಿ ಆರ್ಭಟ: 36 ಎಸೆತಗಳಲ್ಲಿ ಶತಕ ಸಿಡಿಸಿ ಐಪಿಎಲ್ ನಲ್ಲಿ ಇತಿಹಾಸ ಬರೆದ ವೈಭವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಣಚಂಡಿಯಂತೆ ಅಬ್ಬರಿಸಿದ್ದಾರೆ. ಕೇವಲ 36 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕ ಪೂರೈಸುವ ಮೂಲಕ ಕ್ರಿಕೆಟ್ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಅವರ ಬ್ಯಾಟಿಂಗ್ ವೈಖರಿ ಅದ್ಭುತವಾಗಿತ್ತು. ಕೇವಲ 37 ಎಸೆತಗಳನ್ನು ಎದುರಿಸಿದ ಅವರು 103 ರನ್ ಗಳಿಸಿ ಔಟಾದರು. ವಿಶೇಷವೆಂದರೆ, ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ ಭರ್ಜರಿ 12 ಸಿಕ್ಸರ್ಗಳಿದ್ದವು. ಅಂದರೆ, ಕೇವಲ 17 ಬೌಂಡರಿ ಎಸೆತಗಳಿಂದಲೇ ಅವರು ಬರೋಬ್ಬರಿ 92 ರನ್ ಕಲೆಹಾಕಿದ್ದು ಅವರ ಸ್ಫೋಟಕ ಆಟಕ್ಕೆ ಸಾಕ್ಷಿ.

ಈ ಪಂದ್ಯದಲ್ಲಿ ವೈಭವ್ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ:

ಕೇವಲ 15 ಎಸೆತಗಳಲ್ಲಿ ಫಿಫ್ಟಿ ಪೂರೈಸುವ ಮೂಲಕ ಅಬ್ಬರಿಸಿದರು. ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ವೈಭವ್ ಹೆಸರಲ್ಲಿದೆ. ಕಳೆದ ವರ್ಷ (2025) ಅವರು ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು.

ಐಪಿಎಲ್ ಇತಿಹಾಸದಲ್ಲೇ 36 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ.

ಈ ಸ್ಫೋಟಕ ಶತಕದೊಂದಿಗೆ 2026ರ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ‘ಆರೆಂಜ್ ಕ್ಯಾಪ್’ ಅನ್ನು ತನ್ನದಾಗಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !