ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಕುಟುಂಬದ ಮೇಲೆ ವಾಮಾಚಾರದ ಆರೋಪವಿದ್ದು, ಗ್ರಾಮಸ್ಥರೇ ಅವರನ್ನು ಹೊಡೆದು ಕೊಂದಿದ್ದಾರೆ.
ಸೆಪ್ಟೆಂಬರ್ 15 ರಂದು ಗ್ರಾಮದ ಸುಮಾರು 15 ಜನರು ಮನೆಗೆ ನುಗ್ಗಿ ಕುಟುಂಬ ಸದಸ್ಯರೆಲ್ಲರ ಮೇಲೆ ಒಬ್ಬೊಬ್ಬರಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದೊಣ್ಣೆ, ಕೊಡಲಿಯಿಂದ ತೀವ್ರವಾಗಿ ಥಳಿಸಲಾಗಿದೆ. ಬಳಿಕ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತರನ್ನು ಮೌಸಂ ಕನ್ನಾ, ಮೌಸಂ ಬುಚ್ಚಾ, ಮೌಸಂ ಬಿರಿ, ಕರ್ಕ ಲಚ್ಚಿ ಮತ್ತು ಮೌಸಂ ಅರ್ಜೋ ಎಂದು ಗುರುತಿಸಲಾಗಿದೆ.
ಮೃತರಲ್ಲಿ ಛತ್ತೀಸ್‌ಗಢ ಪೊಲೀಸರೊಂದಿಗೆ ಕೆಲಸ ಮಾಡುವ ಹೆಡ್ ಕಾನ್‌ಸ್ಟೆಬಲ್ ಕೂಡ ಸೇರಿದ್ದಾರೆ. ಪೊಲೀಸರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದಾಗ ಮನೆಯವರು ವಾಮಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇವರು ಮಾಡುವ ವಾಮಾಚಾರದಿಂದ ಹಳ್ಳಿಯಲ್ಲಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಹಾಗೂ ಕೆಲವರಿಗೆ ಹಾನಿಯಾಗಿದೆ ಎಂದು ಹೊಡೆದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿಗಳು ತಾವೇ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.