May 6, 2026
Wednesday, May 6, 2026
spot_img

ದುಬಾರೆ ಪ್ರವಾಸಿ ತಾಣಕ್ಕೆ ತೂಗು ಸೇತುವೆ ಭಾಗ್ಯ: 7.30 ಕೋಟಿ ವೆಚ್ಚದ ಯೋಜನೆಗೆ ಅರಣ್ಯ ಸಚಿವರಿಂದ ಚಾಲನೆ

ಹೊಸ ದಿಗಂತ ವರದಿ,ಮಡಿಕೇರಿ:

ಕೊಡಗಿನ ಪ್ರವಾಸಿ ತಾಣ ದುಬಾರೆಯ ಕಾವೇರಿ ಹೊಳೆಗೆ ಸುಮಾರು 7.30 ಕೋಟಿ ರೂ‌. ವೆಚ್ಚದಲ್ಲಿ ನಿರ್ಮಾಣವಾಗಲಿರುವ ‘ತೂಗು ಸೇತುವೆ’ ಕಾಮಗಾರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಕುಶಾಲನಗರ ತಾಲೂಕಿನ, ಕುಶಾಲನಗರ ವಲಯದ ನಂಜರಾಯಪಟ್ಟಣ ಗ್ರಾಮದ ದುಬಾರೆ ಹಾಡಿ ಜನಗಳಿಗೆ ತುರ್ತು ಸಂದರ್ಭದಲ್ಲಿ, ವೈದ್ಯಕೀಯ ಚಿಕಿತ್ಸೆಗೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಲು ಹೊಳೆ ದಾಟುವ ಪರಿಸ್ಥಿತಿ ಇತ್ತು. ಇಲ್ಲವೇ ದುಬಾರೆ-ಮಾಲ್ದಾರೆ ಮಾರ್ಗವಾಗಿ ಮೀಸಲು ಅರಣ್ಯದ ಒಳಗಡೆ ಸುಮಾರು 10 ಕಿ.ಮೀ ಗಳು ತೆರಳಬೇಕಾಗಿತ್ತು. ಅಲ್ಲದೇ ಮಳೆಗಾಲದ ಸಂದರ್ಭದಲ್ಲಿ ಶಿಬಿರಕ್ಕೆ ಬರುವ ಪ್ರವಾಸಿಗರಿಗೂ ಅನಾನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದುಬಾರೆಯಲ್ಲಿ ತೂಗುಸೇತುವೆ ನಿರ್ಮಿಸಬೇಕೆಂಬುದು ಆ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು.

ಇದೀಗ ದುಬಾರೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಈ ತೂಗುಸೇತುವೆಯನ್ನು ಕೊಡಗು ಫೌಂಡೇಷನ್ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿದ್ದು, ಇದರಿಂದ ದುಬಾರೆ ಹಾಡಿಯಲ್ಲಿ ವಾಸಿಸುತ್ತಿರುವ 150 ಕ್ಕೂ ಅಧಿಕ‌ ಕುಟುಂಬಗಳ ಜನರಿಗೂ, ಸಾಕಾನೆ ಶಿಬಿರದ ಸಿಬ್ಬಂದಿಗಳಿಗೂ ಮತ್ತು ಪ್ರವಾಸಿಗರಿಗೂ ಹೆಚ್ಚು ಅನುಕೂಲವಾಗಲಿದೆ.

ವಸತಿ ಸಮುಚ್ಛಯ: ಕುಶಾಲನಗರ ವಲಯದ ಉಪ ವಲಯ ಅರಣ್ಯಾಧಿಕಾರಿಗಳಿಗಾಗಿ 2025-26ನೇ ಸಾಲಿನ ಕಾಂಪಾ ಯೋಜನೆಯಡಿ ಕುಶಾಲನಗರ ಪಟ್ಟಣದಲ್ಲಿರುವ ಸರ್ಕಾರಿ ನಾಟಾ ಸಂಗ್ರಹಾಲಯದ ಆವರಣದಲ್ಲಿ ಹೊಸದಾಗಿ 90 ಲಕ್ಷ ರೂ. ವೆಚ್ಚದಲ್ಲಿ 4 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.ಅಲ್ಲದೆ ಮಡಿಕೇರಿ ವಿಭಾಗದ ಕುಶಾಲನಗರ ವಲಯದ ದುಬಾರೆ ಸಾಕಾನೆ ಶಿಬಿರಕ್ಕೆ ಹೊಸದಾಗಿ ಕೊಡಗು ಫೌಂಡೇಷನ್ ಯೋಜನೆಯಡಿ 29 ಲಕ್ಷ ರೂ.ಗಳಿಗೆ ಅಶೋಕ್ ಲೈಲ್ಯಾಂಡ್ ಕಂಪೆನಿಯ 10 ಚಕ್ರದ ಒಂದು ಲಾರಿ, ಮಡಿಕೇರಿ ವಿಭಾಗಕ್ಕೆ ಕೊಡಗು ಫೌಂಡೇಷನ್ ಯೋಜನೆಯಡಿ, ಮಾನವ ಪ್ರಾಣಿ ಸಂಘರ್ಷ ನಿಯಂತ್ರಣಕ್ಕಾಗಿ 37.20 ಲಕ್ಷ ರೂ. ಗಳಲ್ಲಿ ಖರೀದಿಸಲಾದ ನಾಲ್ಕು, ಬೊಲೇರೋ ವಾಹನ, ಕಾಂಪಾ ಯೋಜನೆಯಡಿ 50,400 ರೂ.ವೆಚ್ಚದಲ್ಲಿ ನಾಲ್ಕು ಜನ ರೈತರಿಗೆ ಜೇನು ತೆಗೆಯುವ ಯಂತ್ರ, ಒಬ್ಬ ರೈತರಿಗೆ 25 ಸಾವಿರ ರೂ. ವೆಚ್ಚದಲ್ಲಿ ಜೇನು ಕೃಷಿ ಬಗ್ಗೆ ತರಬೇತಿ, ರೂ.15ಲಕ್ಷ ವೆಚ್ಚದಲ್ಲಿ ಕಾಡಂಚಿನ ಗ್ರಾಮದ 30 ಜನ ಫಲಾನುಭವಿಗಳಿಗೆ ಜೇನುಪೆಟ್ಟಿಗೆ, 15 ಜನ‌ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಚೆಟ್ಟಳ್ಳಿ ಮತ್ತು ಚಿಕ್ಕತ್ತೂರು ಸರ್ಕಾರಿ ಶಾಲೆಗಳಿಗೆ ಸಂವಾದನಾತ್ಮಕ ಫಲಕಗಳ ವಿತರಣೆಯೂ ಈ ಸಂದರ್ಭ ನಡೆಯಿತು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !