ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಲ್ಲಿ ಅನುಮಾನಾಸ್ಪದವಾಗಿ ವೈದ್ಯೆಯೊಬ್ಬರು ಮೃತಪಟ್ಟಿದ್ದಾರೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಜಿ.ಎಸ್.ವಿದ್ಯಾಧರೆ ಮೃತರು. ಗಂಡನ ಕಿರುಕುಳ ಹಾಗೂ ಕೊಲೆ ಆರೋಪ ಕೇಳಿ ಬಂದಿದೆ.
ಮಂಡ್ಯದ ಗೌಡಗೆರೆಯ ವಿದ್ಯಾಧರೆಯನ್ನು ಕೆ.ಆರ್.ಆಸ್ಪತ್ರೆಯ ಮೂಳೆ ತಜ್ಞ ಡಾ.ಷಣ್ಮುಖ ವಿವಾಹವಾಗಿದ್ದರು. 14 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. 6-7 ವರ್ಷಗಳಿಂದ ಪತಿ-ಪತ್ನಿ ನಡುವೆ ವಿರಸ ಉಂಟಾಗಿತ್ತು. ಕಳೆದ ನಾಲ್ಕೈದು ತಿಂಗಳಿಂದ ಮನಸ್ತಾಪ ಹೆಚ್ಚಾಗಿತ್ತು. ಹೀಗಾಗಿ ಒಂದೇ ಅಪಾರ್ಟ್‌ಮೆಂಟ್‌ನ ಬೇರೆ ಬೇರೆ ಫ್ಲೋರ್‌ಗಳಲ್ಲಿ ಪ್ರತ್ಯೇಕ ವಾಸಕ್ಕೆ ನ್ಯಾಯ ಪಂಚಾಯಿತಿ ಮಾಡಿಕೊಂಡಿದ್ದರು. ಮೈಸೂರಿನ ಆರ್‌ಟಿಒ ಸರ್ಕಲ್ ಬಳಿ ಇರುವ ಡೆನ್ಮಾರ್ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದರು.
ನಿನ್ನೆ ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದ ವೈದ್ಯೆ ವಿದ್ಯಾಧರೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿ ಷಣ್ಮುಖ ಮೇಲೆ ವಿದ್ಯಾಧರೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಪತಿಯೇ ಕೊಲೆ ಮಾಡಿದ್ದಾನೆ ಎಂದು ವಿದ್ಯಾಧರೆ ತಮ್ಮ , ತಾಯಿ, ಸಂಬಂಧಿಕರಿಂದ ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಮೈಸೂರಿನ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.