`ಸುಸ್ಥಿರತೆ’ ಪರಿಸರ ಕಾಳಜಿಯಷ್ಟೇ ಅಲ್ಲ, ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಭೂತಗನ್ನಡಿ

– ಡಾ. ಅರುಣಭಾ ಘೋಷ್

ಇಂಧನ, ಪರಿಸರ ಮತ್ತು ನೀರು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಸುಸ್ಥಿರತೆಗೆ ನೀತಿಗಳು ಬೇಕು, ಆದರೆ ಅದಕ್ಕೆ ಜನರ ಅಗತ್ಯವೂ ಇದೆ. ನಾವು ಇಂಧನ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಜನರ ಬಳಿಗೆ ಕೊಂಡೊಯ್ಯದ ಹೊರತು, ಜನಪರ ಪ್ರಭಾವವನ್ನು ಹೊಂದಲು ಅಥವಾ ಕಾರ್ಯಕ್ರಮಗಳನ್ನು ಉಳಿಸಿಕೊಳ್ಳಲು ಅಗತ್ಯವಾದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದ ಹೊರತು, ನಾವು ದೀರ್ಘಾವಧಿಯ ಸಾಮಾಜಿಕ ಕಲ್ಯಾಣವನ್ನು ಸಾಧಿಸುವ ಸಾಧ್ಯತೆಯಿಲ್ಲ.

ಇದಕ್ಕಾಗಿಯೇ, ಭಾರತದ ಸುಸ್ಥಿರತೆಯ ಉಪಕ್ರಮಗಳ ವಿಷಯಕ್ಕೆ ಬಂದಾಗ, ಮಾತುಗಳಿಗಿಂತ ಕ್ರಿಯೆಗಳು ಹೆಚ್ಚು ಗೋಚರಿಸುತ್ತವೆ.
ಸುಸ್ಥಿರತೆ ಕೇವಲ ಪರಿಸರ ಕಾಳಜಿಯಲ್ಲ, ಇದು ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಭೂತಗನ್ನಡಿಯಾಗಿದೆ. ಸಣ್ಣ ರೈತರನ್ನೇ ತೆಗೆದುಕೊಳ್ಳಿ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸುವ ದೇಶವಾಗಿದೆ, ಆದರೆ ಈ ಉತ್ಪನ್ನದ ಅಂದಾಜು ಶೇ. 5-16 ರಷ್ಟು ವಾರ್ಷಿಕವಾಗಿ ವ್ಯರ್ಥವಾಗುತ್ತಿದೆ. ನವೀಕರಿಸಬಹುದಾದ ಇಂಧನ-ಚಾಲಿತ ಜೀವನೋಪಾಯದ ಉತ್ಪನ್ನಗಳೊಂದಿಗೆ ಬದಲಾವಣೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಆಂಧ್ರಪ್ರದೇಶದ ಮುಸಲರೆಡ್ಡಿಗಾರಿಪಲ್ಲಿ ಎಂಬ ಪುಟ್ಟ ಹಳ್ಳಿಯಲ್ಲಿ ಬದನೆಕಾಯಿ, ಟೊಮ್ಯಾಟೊ, ಹಾಗಲಕಾಯಿ, ಬಾಳೆಹಣ್ಣುಗಳನ್ನು ಸೋಲಾರ್ ಡ್ರೈಯರ್‌ಗಳಲ್ಲಿ ಒಣಗಿಸುವ ಮೂಲಕ ಮಹಿಳಾ ಗುಂಪುಗಳು ಪ್ರತಿ ತಿಂಗಳು ಸುಮಾರು 3.5 ಲಕ್ಷ ರೂಪಾಯಿಗಳನ್ನು ಗಳಿಸುತ್ತಿವೆ. ಅತ್ಯಂತ ದುರ್ಬಲ ಮತ್ತು ನಿರ್ಲಕ್ಷಿತರು ತಮ್ಮ ಜೀವನ ಮತ್ತು ಜೀವನೋಪಾಯವನ್ನು ಸುಧಾರಿಸಲು ಈ ಏಜೆನ್ಸಿ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ಸಮರ್ಥರಾದಾಗ, ಹೊಸ ಮಾರುಕಟ್ಟೆಗಳು ಮತ್ತು ವ್ಯವಹಾರಗಳ ಅವಕಾಶಗಳಿಗೆ, ನಂತರ ದೊಡ್ಡ ರಾಷ್ಟ್ರೀಯ ನೀತಿ ಕಾರ್ಯವಿಧಾನಕ್ಕೆ ಬಲ ನೀಡುತ್ತದೆ. ಭಾರತವು ಈಗ ಜೀವನೋಪಾಯಕ್ಕಾಗಿ ನವೀಕರಿಸಬಹುದಾದ ನೀತಿಯನ್ನು ಹೊಂದಿರುವ ಮೊದಲ ದೇಶವಾಗಿದೆ.

ಈ ರೀತಿಯ ಕ್ರಮಗಳ ಮೂಲಕ, ಸುಸ್ಥಿರತೆಯ ಪರಿವರ್ತನೆಯು ಕಳೆದ ದಶಕದಿಂದ ಭಾರತೀಯರಿಗೆ ಹತ್ತಿರವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ (ಗ್ಲೋಬಲ್ ಸೌತ್‌) ಇತರ ದೇಶಗಳಿಗೆ ಹಸಿರು ಮತ್ತು ಅಂತರ್ಗತ ಆರ್ಥಿಕತೆಯ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುವ ಮೂರು ಅಂಶಗಳಿವೆ.

ಮೊದಲನೆಯದಾಗಿ, ಅಭಿವೃದ್ಧಿಯನ್ನು ಜನಕೇಂದ್ರಿತಗೊಳಿಸುವುದು. ಇದು ಸುಮಾರು 100 ಪ್ರತಿಶತ ಗೃಹ ವಿದ್ಯುದೀಕರಣವನ್ನು ಖಚಿತಪಡಿಸಿದ ಸೌಭಾಗ್ಯ ಯೋಜನೆಯಾಗಿರಬಹುದು ಅಥವಾ ಶುದ್ಧ ಅಡುಗೆ ಇಂಧನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 9.5 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಿದ ಉಜ್ವಲ ಯೋಜನೆಯಾಗಿರಬಹುದು ಅಥವಾ ವಿದ್ಯುತ್‌ ನಿರ್ವಹಣೆಯನ್ನು ಅಕ್ಷರಶಃ ಜನರ ಕೈಗೆ ನೀಡುವ ಸ್ಮಾರ್ಟ್ ಮೀಟರ್ ಆರಂಭ ಆಗಿರಬಹುದು.

ಭಾರತವು ಇಂಧನ ಪರಿವರ್ತನೆಯನ್ನು ಮನೆಮನೆಯ ವಿದ್ಯಮಾನವನ್ನಾಗಿ ಮಾಡುತ್ತಿದೆ. ಎಲ್ಇಡಿ ಲೈಟಿಂಗ್ ಮೂಲಕ ಇಂಧನ ಸಂರಕ್ಷಣೆಯ ಗುರಿಯನ್ನು ಹೊಂದಿರುವ ಉಜಾಲಾ ಯೋಜನೆಯು ವಾರ್ಷಿಕವಾಗಿ ಸುಮಾರು 3.9 ಕೋಟಿ ಟನ್‌ ಗಳಷ್ಟು ಇಂಗಾಲ ಹೊರಸೂಸುವಿಕೆಯನ್ನು ತಡೆಯುತ್ತಿದೆ. ಹಾಗೆಯೇ, ಜಲ ಜೀವನ್ ಮಿಷನ್ 8 ಕೋಟಿ ಗ್ರಾಮೀಣ ಕುಟುಂಬಗಳಿಗೆ ಸುರಕ್ಷಿತ ಕುಡಿಯುವ ನೀರಿಗಾಗಿ ನಲ್ಲಿ ಸಂಪರ್ಕವನ್ನು ಒದಗಿಸಿದೆ. 2026 ರ ವೇಳೆಗೆ ಆಯ್ದ ನಗರಗಳಲ್ಲಿ ಗಾಳಿಯ ಕಣಗಳ ವಾಯುಮಾಲಿನ್ಯವನ್ನು ಶೇಕಡಾ 40 ರಷ್ಟು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಇದಲ್ಲದೆ, ಏಕ-ಬಳಕೆಯ ಪ್ಲಾಸ್ಟಿಕ್ ನಿಗ್ರಹ, ಸ್ವಚ್ಛ ಭಾರತ್ ಮಿಷನ್ ನಂತಹ ಸುಸ್ಥಿರತೆಯ ಉಪಕ್ರಮಗಳು ಹೇಗೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರನ್ನು ತಲುಪಿವೆ ಎಂಬುದಕ್ಕೆ ಉದಾಹರಣೆಗಳಾಗಿವೆ.

ನಾವು ಅಂತಹ ಜನಕೇಂದ್ರಿತ ಉಪಕ್ರಮಗಳನ್ನು ಹೆಚ್ಚಿಸಿದಂತೆ, ತಂತ್ರಜ್ಞಾನಗಳು ಮತ್ತು ಸಂಬಂಧಿತ ಮಧ್ಯಸ್ಥಿಕೆಗಳು ವಾಸ್ತವದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮನೆಗಳಿಂದ ನೈಜ-ಸಮಯದ ಮತ್ತು ಉತ್ತಮ-ಗುಣಮಟ್ಟದ ಮಾಹಿತಿ ಹರಿವನ್ನು ಬಲಪಡಿಸುವತ್ತ ಗಮನಹರಿಸಬಹುದು. ಆಡಳಿತದ ಎಲ್ಲಾ ಹಂತದ ಅಧಿಕಾರಿಗಳು ಇಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಜನರಿಂದ ಕಾಲಕಾಲಕ್ಕೆ ಪ್ರತಿಕ್ರಿಯೆಯನ್ನು ಪಡೆಯಬೇಕಾಗುತ್ತದೆ.

ಎರಡನೆಯದಾಗಿ, ಆರ್ಥಿಕ-ಕೇಂದ್ರಿತ ಮಧ್ಯಸ್ಥಿಕೆಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಸುಸ್ಥಿರತೆಯನ್ನು ಚಾಲನೆ ಮಾಡುವುದು. 2070 ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸಲು, ಭಾರತದ ಇಂಧನ ವ್ಯವಸ್ಥೆ ಮತ್ತು ಆರ್ಥಿಕ ರಚನೆಗಳು ಬದಲಾಗಬೇಕಾಗಿದೆ. ದೇಶವು ಈಗ ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ನವೀಕರಿಸಬಹುದಾದ ಮತ್ತು ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ. ಸಿಇಇಡಬ್ಲ್ಯು, ಎನ್‌ ಆರ್‌ ಡಿಸಿ ಮತ್ತು ಎಸ್‌ ಸಿ ಜಿ ಜೆ ವಿಶ್ಲೇಷಣೆಯ ಪ್ರಕಾರ, ಭಾರತದ ನವೀಕರಿಸಬಹುದಾದ ಇಂಧನ ವಲಯವು 2030 ರ ವೇಳೆಗೆ 10 ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. ಭವಿಷ್ಯದ ಈ ಉದ್ಯೋಗಿಗಳಿಗೆ ತರಬೇತಿ ನೀಡಲು, ಹಸಿರು ಉದ್ಯೋಗಗಳಿಗಾಗಿ ಕೌಶಲ್ಯ ಮಂಡಳಿಯು ಹಸಿರು ವ್ಯವಹಾರಗಳು ಮತ್ತು ಸೇವೆಗಳನ್ನು ಕುರಿತು ಕಾರ್ಮಿಕರಿಗೆ ತರಬೇತಿ ನೀಡುತ್ತಿದೆ. ಗ್ರಾಮೀಣ ಭಾರತವನ್ನು ಇದೆಲ್ಲದರಿಂದ ಹೊರಗಿಡಲಾಗಿಲ್ಲ. ವಿತರಿಸಲಾದ ನವೀಕರಿಸಬಹುದಾದ ಇಂಧನ ಉತ್ಪನ್ನಗಳು 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮಾರುಕಟ್ಟೆ ಅವಕಾಶವನ್ನು ಹೊಂದಿದ್ದು, ತಳಮಟ್ಟದ ಮಹಿಳೆಯರನ್ನು ನೇರವಾಗಿ ಸಬಲೀಕರಣಗೊಳಿಸುತ್ತಿವೆ. ಅಂತೆಯೇ, ಅಕ್ಟೋಬರ್ 2022 ರ ವೇಳೆಗೆ 1.5 ಲಕ್ಷ ನೀರಾವರಿ ಪಂಪ್‌ಗಳಿಗೆ ಸೋಲಾರ್ ಅಳವಡಿಕೆ ಮಾಡಿರುವ ಪ್ರಧಾನಮಂತ್ರಿ-ಕುಸುಮ್‌ ಯೋಜನೆಯು ರೈತರ ನೀರಾವರಿ ಬಿಲ್‌ಗಳನ್ನು ಕಡಿಮೆ ಮಾಡುವ ಮತ್ತು ಅವರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಜಗತ್ತು ಪಳೆಯುಳಿಕೆಯೇತರ ಇಂಧನಗಳಿಂದ ದೂರ ಸರಿಯುತ್ತಿರುವಾಗ, ಭವಿಷ್ಯದ ಇಂಧನಗಳಲ್ಲಿ, ವಿಶೇಷವಾಗಿ ಹಸಿರು ಹೈಡ್ರೋಜನ್‌ನಲ್ಲಿ ನಾವು ದೊಡ್ಡ ದಾಪುಗಾಲುಗಳನ್ನು ಹಾಕುತ್ತಿದ್ದೇವೆ. ವಿಶ್ವದ ಅತಿ ದೊಡ್ಡದಾದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ನೊಂದಿಗೆ ಭಾರತವು ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯಲ್ಲಿ ರಾಜಿ ಮಾಡಿಕೊಳ್ಳದೆ, ಗೊಬ್ಬರಗಳು ಮತ್ತು ಉಕ್ಕಿನಂತಹ ಭಾರೀ ಕೈಗಾರಿಕೆಗಳನ್ನು ಇಂಗಾಲಮುಕ್ತ ಮಾಡಲು ಹಸಿರು ಹೈಡ್ರೋಜನ್ ಅನ್ನು ಬಳಸಬಹುದಾಗಿದೆ.

ಭಾರತದ ನಗರ ಮತ್ತು ಕೃಷಿ ಆರ್ಥಿಕತೆಗೆ ಇವು ನಿಜಕ್ಕೂ ದೊಡ್ಡ ಕ್ರಮಗಳಾಗಿವೆ. ಆದಾಗ್ಯೂ, ಅವುಗಳ ನಿಜವಾದ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಈ ಕ್ರಮಗಳನ್ನು ಮಾಪನ ಮಾಡಬೇಕಾಗಿದೆ. ಉತ್ಪಾದನೆಗೆ ಸಂಬಂಧಿಸಿದ ಉತ್ಪಾದನೆ ಆಧರಿತ ಪ್ರೋತ್ಸಾಹಕಗಳು (ನಿರ್ದಿಷ್ಟವಾಗಿ ಕೇವಲ ಕ್ಲೀನ್ ಟೆಕ್ ಉತ್ಪನ್ನಗಳ ಜೋಡಣೆಗಿಂತ ಹೆಚ್ಚಿನ ಮೌಲ್ಯವರ್ಧನೆಯ ಮೇಲೆ ಕೇಂದ್ರೀಕರಿಸಲಾಗಿದೆ), ವರ್ಧಿತ ಬಂಡವಾಳ ಬೆಂಬಲ, ಪೂರೈಕೆ ಸರಪಳಿಗಳ ವೈವಿಧ್ಯೀಕರಣ ಮತ್ತು ಖರೀದಿದಾರರಿಗೆ ಪ್ರೋತ್ಸಾಹಗಳ (ಉದಾಹರಣೆಗೆ ವಿದ್ಯುತ್ ವಾಹನಗಳ ಫೇಮ್ ಯೋಜನೆ) ಮೂಲಕ ಇವುಗಳನ್ನು ಮಾಪನ ಮಾಡಲಾಗುವುದು.

ಮೂರನೆಯದಾಗಿ, ಭಾರತವು ಅಂತಾರಾಷ್ಟ್ರೀಯವಾಗಿ ಸುಸ್ಥಿರತೆಯ ಉಪಕ್ರಮಗಳನ್ನು ಭದ್ರಪಡಿಸುತ್ತಿದೆ. 2015 ರಲ್ಲಿ ಭಾರತ ಮತ್ತು ಫ್ರಾನ್ಸ್ ಆರಂಭಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐ ಎಸ್‌ ಎ) ವನ್ನು ಸೌರ ಶಕ್ತಿಯ ಬೆಲೆಗಳನ್ನು ಕಡಿಮೆ ಮಾಡಲು, ಬೇಡಿಕೆಯನ್ನು ಸೃಷ್ಟಿಸಲು ಮತ್ತು ಈಗ ಸಹಿ ಮಾಡಿರುವ 115 ದೇಶಗಳಲ್ಲಿ ಸಹಯೋಗದ ಅವಕಾಶಗಳನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಅಂತೆಯೇ, 2019 ರಲ್ಲಿ ಭಾರತವು ಪ್ರಾರಂಭಿಸಿದ ವಿಪತ್ತು ತಾಳಿಕೆ ಮೂಲಸೌಕರ್ಯ ಒಕ್ಕೂಟ (ಸಿ ಡಿ ಆರ್‌ ಐ) ಹವಾಮಾನ ಬದಲಾವಣೆಯ ಆಘಾತಗಳನ್ನು ಎದುರಿಸುವ ಪ್ರದೇಶಗಳಲ್ಲಿ ವಿಪತ್ತು ತಾಳಿಕೆಯ ಮೂಲಸೌಕರ್ಯವನ್ನು ಉತ್ತೇಜಿಸುತ್ತಿದೆ. ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ ಅಡಿಯಲ್ಲಿ, 2030 ರ ವೇಳೆಗೆ ಅರಣ್ಯದ ಮೂಲಕ 2.5-3 ಶತಕೋಟಿ ಟನ್‌ ಗಳಷ್ಟು ಇಂಗಾಲ ಹೀರುವಿಕೆ ವ್ಯವಸ್ಥೆಯನ್ನು ರಚಿಸಲು ಯೋಜಿಸಿದೆ. ಜೌಗು ಪ್ರದೇಶಗಳ ನಿರ್ವಹಣೆಯನ್ನು ಸುಧಾರಿಸಲು (ಹವಾಮಾನ ಅಪಾಯಗಳನ್ನು ತಡೆಯುವಲ್ಲಿ ಅವುಗಳ ಪಾತ್ರವನ್ನು ಒಳಗೊಂಡಂತೆ) ಮತ್ತು ಜೈವಿಕ ವೈವಿಧ್ಯತೆ ಸಂರಕ್ಷಣೆಯನ್ನು ಉತ್ತೇಜಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತವು ಮರುಭೂಮೀಕರಣವನ್ನು ಎದುರಿಸುವ ವಿಶ್ವಸಂಸ್ಥೆಯ ಸಮಾವೇಶದ ಪಕ್ಷಗಳ ಸಮ್ಮೇಳನವನ್ನು ಆಯೋಜಿಸಿದಾಗ 26 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಮರುಸ್ಥಾಪಿಸುವ ಬದ್ಧತೆ ತೋರಿಸಿದೆ.

ಅಂತಿಮವಾಗಿ, ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಮೂಲಕ ಭಾರತವು ಸುಸ್ಥಿರ ಅಭಿವೃದ್ಧಿಯ ಕುರಿತು ಪ್ರಮುಖ ಭಾಗವಾಗಿ ಸುಸ್ಥಿರ ಬಳಕೆಯನ್ನು ಇರಿಸಿದೆ. ಇದು ತನ್ನ ನಾಗರಿಕರು ಹಾಗೂ ಬೇರೆಡೆ ಇರುವ ಜನರಿಗೆ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವುದು ಹೇಗೆ? ಮತ್ತು ಜೀವನದ ಅವಕಾಶಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವುದು ಹೇಗೆ? ನಡವಳಿಕೆಯನ್ನು ಉತ್ತೇಜಿಸುವುದು, ಮರುಬಳಕೆ ಆರ್ಥಿಕತೆಗೆ ಮಾರುಕಟ್ಟೆಗಳನ್ನು ಸಕ್ರಿಯಗೊಳಿಸುವುದು ಮತ್ತು ಆಕಾಂಕ್ಷೆಗಳನ್ನು ಮರುವ್ಯಾಖ್ಯಾನಿಸುವುದು ಹೇಗೆ? ಎಂಬುದರ ಕುರಿತು ಸವಾಲನ್ನು ಒಡ್ಡಿದೆ.

2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನಕ್ಕೇರುವ ತನ್ನ ಪಯಣದ ಏಳು ಸ್ತಂಭಗಳಲ್ಲಿ “ಹಸಿರು ಬೆಳವಣಿಗೆ” ಒಂದಾಗಿರುತ್ತದೆ ಎಂದು ಭಾರತ ಘೋಷಿಸಿದೆ. ಮೊದಲು ಮಾಲಿನ್ಯಗೊಳಿಸುವ ಮತ್ತು ನಂತರ ಸ್ವಚ್ಛಗೊಳಿಸುವ ಸುಲಭದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದಾದ ಪ್ರಲೋಭನೆಗಳ ಹೊರತಾಗಿಯೂ, ಉದ್ಯೋಗ, ಬೆಳವಣಿಗೆ ಮತ್ತು ಸುಸ್ಥಿರತೆಯು ಹೇಗೆ ಒಟ್ಟಿಗೆ ಹೋಗಬಹುದು ಎಂಬುದನ್ನು ತೋರಿಸಲು ಕಠಿಣ ಆಯ್ಕೆಗಳನ್ನು ಮಾಡಿಕೊಳ್ಳುತ್ತಿದೆ.

ಆದರೆ ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಮಾಲಿನ್ಯದ ತ್ರಿವಳಿ ಬಿಕ್ಕಟ್ಟುಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ. ಇದಕ್ಕೆ ಅಂತಾರಾಷ್ಟ್ರೀಯ ಸಹಕಾರ, ನಿಯಮಗಳ ಅನುಸರಣೆ, ಬದ್ಧತೆಗಳ ನೆರವೇರಿಕೆ, ಶುದ್ಧ ತಂತ್ರಜ್ಞಾನಗಳ ಸಹ-ಅಭಿವೃದ್ಧಿ ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಬಂಡವಾಳದ ಲಭ್ಯತೆಯ ಅಗತ್ಯವಿದೆ. ಅಂತಿಮವಾಗಿ, ಈ ಸುಸ್ಥಿರತೆ ಕಥೆಯ ಯಶಸ್ಸು ಯಾವಾಗಲೂ ಜನರು ಮತ್ತು ಸಮುದಾಯಗಳಿಗೆ ಕಾರ್ಯಾಭಾರವನ್ನು ಮರಳಿ ನೀಡುವಲ್ಲಿ ಇರುತ್ತದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!