ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಚ್ಛತೆಯ ಪಾಠ ಮಕ್ಕಳಿಂದಲೇ ಆರಂಭವಾಗಬೇಕು. ಸ್ವಚ್ಛತೆಯ ಅನುಷ್ಠಾನ ಮನೆಯಿಂದಲೇ ತೊಡಗಬೇಕು ಎಂದು ಕುರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಕುರ್ನಾಡು ಹೇಳಿದ್ದಾರೆ.
ದಕ್ಣಿಣ ಕನ್ನಡ ಜಿಲ್ಲೆಯ ಮುಡಿಪು ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಸಮಿತಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಅ.2ರಂದು ಸೋಮವಾರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ವಚ್ಛಾಮೃತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬಾಳೆಪುಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ.ಬಶೀರ್ ಮುಡಿಪು, ಮುಡಿಪು ಕರಾವಳಿ ಆಟೋ ಪಾರ್ಕ್ ಅಧ್ಯಕ್ಷ ಪ್ರಸಾದ್ ತೆಕ್ಕುಂಜ ಮಾತನಾಡಿದರು. ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಲಾಕ್ಷಿ ಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್.ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಸಾಂಕೇತಿಕವಾಗಿ ಇಬ್ಬರು ಸ್ವಚ್ಛತಾ ಸಿಬ್ಬಂದಿಯನ್ನು ಅಮೃತ ಮಹೋತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು. ಗಾಂಧಿ ಜಯಂತಿ ಪ್ರಯುಕ್ತ ಸನ್ಮಾನಿತರಾಗಬೇಕಿದ್ದ ಇತರ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಅನಿವಾರ್ಯ ಗೈರು ಹಾಜರಾಗಿದ್ದ ಹಿನ್ನೆಲೆ ಅವರ ಪರವಾಗಿ ಇಬ್ಬರು ಸಿಬ್ಬಂದಿ ಸನ್ಮಾನ ಸ್ವೀಕರಿಸಿದರು.
ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್ ಸಂಚಾಲಕ ಕೆ.ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ.ಶೆಟ್ಟಿ, ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಮತ್ತಿತರರು ಹಾಜರಿದ್ದರು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮಹಮ್ಮದ್ ಅಸ್ಗರ್ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ವಂದಿಸಿದರು. ಶಿಕ್ಷಕ ಉಮಾನಾಥ್ ನಿರೂಪಿಸಿದರು.
ಇದಕ್ಕೂ ಮೊದಲು ಎರಡನೇ ವರ್ಷದ ಸ್ವಚ್ಛಾಮೃತ ಅಭಿಯಾನ ಪ್ರಯುಕ್ತ ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಮುಡಿಪು ಪೇಟೆಯಾಗಿ ಭಾರತೀ ಶಾಲೆಯ ತನಕ ಹಳೆ ವಿದ್ಯಾರ್ಥಿಗಳು ಪೇಟೆ ಸ್ವಚ್ಛತೆ ಕೈಗೊಂಡರು.
ಭಾರತೀ ಶಾಲೆಯ ಅಮೃತ ಮಹೋತ್ಸವ ಪ್ರಧಾನ ಸಮಾರಂಭದ ರೂಪುರೇಷೆ ಕುರಿತು ಅಧ್ಯಕ್ಷ ಉಮೇಶ್ ಕೆ.ಆರ್. ನೇತೃತ್ವದಲ್ಲಿ ಸಿದ್ಧತಾ ಸಭೆ ನಡೆಯಿತು. ಅಮೃತ ಮಹೋತ್ಸವ ಸರಣಿ ಕಾರ್ಯಕ್ರಮ ಅಂಗವಾಗಿ ಸ್ವಚ್ಛಾಮೃತ ಆಯೋಜಿಸಲಾಗಿತ್ತು, ಪ್ರಧಾನ ಸಮಾರಂಭ ನ.11 ಹಾಗೂ 12ರಂದು ಅದ್ಧೂರಿಯಿಂದ ನಡೆಯಲಿದೆ.