ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಸಂಸ್ಥೆಗೆ‌ ಒಲಿದ ಪ್ರತಿಷ್ಠಿತ ಸೂರ್ಯಮಿತ್ರ ಪ್ರಶಸ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಇಬ್ಬರು ಸೌರತಜ್ಞರಾದ ನೇವಿಲ್ಲೆ ವಿಲಿಯಮ್ಸ್, ರಿಚೆಂಡಾ ವಾನ್ ಲೀವೆನ್ ಮತ್ತು ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಪ್ರಪಂಚದಾದ್ಯಂತ ಸೌರಶಕ್ತಿಯ ಉಪಯೋಗಗಳನ್ನು ಉತ್ತೇಜಿಸುತ್ತಿರುವ ನೇವಿಲ್ಲೆ ವಿಲಿಯಮ್ಸ್ ಅವರು 2020ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದು, 2021ನೇ ಸಾಲಿನ ಪ್ರಶಸ್ತಿಗೆ ಇಂಧನ ಬಳಕೆ ಕುರಿತ ಜಾಗತಿಕ ಮನ್ನಣೆ ಪಡೆದ ಪ್ರಮುಖ ತಜ್ಞೆ ಹಾಗೂ ಅನೇಕ ಜಾಗತಿಕ ಸಂಸ್ಥೆಗಳ ಮಾರ್ಗದರ್ಶಕಿ ರಿಚೆಂಡಾ ವಾನ್ ಲೀವೆನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2022ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕ ರಾಜ್ಯದ ಒಳ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸುವ ಕೆಲಸ ಮಾಡುತ್ತಿರುವ ಹೆಸರಾಂತ ಸರ್ಕಾರೇತರ ಸಂಸ್ಥೆ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆ (ಎಸ್‌ವಿವೈಎಂ) ಪಾತ್ರವಾಗಿದೆ.

 

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ಎಚ್. ಹರೀಶ್ ಹಂದೆ ಅವರು ಸಂಸ್ಥಾಪಕರಾಗಿರುವ ಸೆಲ್ಕೋ ಸಂಸ್ಥೆಯು ಪ್ರತಿಷ್ಠಿತ ವಾರ್ಷಿಕ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು 2012ರಿಂದ ನೀಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಹರಿಕಾರರು ಮತ್ತು ಗ್ರಾಮೀಣ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದ ಅಸಾಧಾರಣ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸೆ.24 ರಂದು ಸಂಜೆ ನಡೆಯಲಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಕಾರಿ ಮೋಹನ ಭಾಸ್ಕರ ಹೆಗಡೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!