‘ಸ್ವಿಫ್ಟ್’ ಬ್ಯಾಂಕಿಂಗ್ ಅಸ್ತ್ರದಿಂದ ರಷ್ಯಾದ ಆರ್ಥಿಕತೆ ಕೆಡವುತ್ತೇನೆಂದಿದೆ ಯುರೋಪ್, ಆದರೆ ಇಲ್ಲಿರೋ ಆತಂಕ ಏನು ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯ ವಿರುದ್ಧ ಯುರೋಪ್ ಮತ್ತು ಅಮೆರಿಕ ಮಾಡುತ್ತಿರುವ ಆರ್ಥಿಕ ಪ್ರಹಾರಗಳ ಪೈಕಿ ಪ್ರಮುಖವಾದದ್ದು ಅದನ್ನು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ನ ತಂತ್ರಜ್ಞಾನ ವ್ಯವಸ್ಥೆಯಾದ ‘ಸ್ವಿಫ್ಟ್’ನಿಂದ ಹೊರಗಿಡುವುದು. ಹೀಗಾದಾಗ ಅಂತಾರಾಷ್ಟ್ರೀಯಮಟ್ಟದಲ್ಲಿ ತನ್ನ ಆಮದು ಮತ್ತು ರಫ್ತುಗಳಿಗೆ ಪಾವತಿ ಮಾಡುವುದು ಕಷ್ಟವಾಗಿ ರಷ್ಯದ ಆರ್ಥಿಕತೆ ಮುಗ್ಗರಿಸುತ್ತದೆ ಅನ್ನೋದು ಮುಖ್ಯಾಂಶ. ಆದರೆ ಇದು ಹೇಳಿದಷ್ಟು ಸುಲಭವೇ? ಈ ಪಾವತಿ ನಿರ್ಬಂಧ ಕೇವಲ ರಷ್ಯಾಕ್ಕೆ ಹೊಡೆತ ಕೊಡುತ್ತದೆಯಾ? ತಮ್ಮ ಇಂಧನ ಬೇಡಿಕೆಗಳಿಗಾಗಿ ರಷ್ಯವನ್ನು ಅವಲಂಬಿಸಿರುವ ಯುರೋಪಿನ ರಾಷ್ಟ್ರಗಳು ಹೇಗೆ ಪಾವತಿ ಮುಂದುವರಿಸುತ್ತವೆ? ಇಷ್ಟಕ್ಕೂ ಇದು ರಷ್ಯವನ್ನು ಮತ್ತಷ್ಟು ಚೀನಾದ ಕಡೆ ನೂಕಿದಂತಾಗಲಿಲ್ಲವೇ? ಇವೆಲ್ಲ ಪ್ರಶ್ನೆಗಳನ್ನು ಪಾಶ್ಚಾತ್ಯ ಮಾಧ್ಯಮಗಳು ಮುಚ್ಚಿಡುತ್ತಿವೆ. ಆದರೆ ವಾಸ್ತವದ ನೆಲೆಗಟ್ಟು ಸ್ವಲ್ಪ ಭಿನ್ನವಿದೆ.

ಈ ನಿಟ್ಟಿನಲ್ಲಿ ಸ್ವಿಫ್ಟ್ ನಿರ್ಬಂಧದ ಸುತ್ತಮುತ್ತ ವಿಷಯಗಳನ್ನು ಅರ್ಥಮಾಡಿಕೊಳ್ಳೋಣ.

ಏನಿದು ಸ್ವಿಫ್ಟ್?

‌ಸ್ವಿಫ್ಟ್ (ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಶನ್)  ಎಂದರೆ ಜಾಗತಿಕವಾಗಿ 200ಕ್ಕಿಂತಲೂ ಹೆಚ್ಚಿನ ದೇಶಗಳ ಬ್ಯಾಂಕ್‌ ಗಳ ಒಕ್ಕೂಟ.  ಇಲ್ಲಿ ಯಾವುದೇ ಹಣಕಾಸು ಆಧರಿಸಿ ವಹಿವಾಟು ನಡೆಯುವುದಿಲ್ಲ ಬದಲಿಗೆ, 200 ದೇಶಗಳ 11,000 ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸುವ ಸುರಕ್ಷಿತ ಸಂದೇಶ ವ್ಯವಸ್ಥೆಯಾಗಿ ಸ್ವಿಫ್ಟ್‌ ಕಾರ್ಯನಿರ್ವಹಿಸುತ್ತದೆ. ಇದು ಗಡಿಯಾಚೆಗಿನ ಪಾವತಿಗಳನ್ನು ಸುಗಮಗೊಳಿಸುತ್ತದೆ. ಈ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ , ವಹಿವಾಟು ಸರಾಗವಾಗಿ ನಡೆಯುವಂತೆ ಮಾಡುತ್ತದೆ. ಸ್ವಿಫ್ಟ್‌ ನ ವಿಶೇಷತೆ ಏನೆಂದರೆ, ಬ್ಯಾಂಕಿಂಗ್‌ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಒಂದು ದಿನದಲ್ಲಿ ಸರಾಸರಿ 4 ಕೋಟಿ ಸಂದೇಶಗಳನ್ನು ಕಳುಹಿಸಬಹುದಾಗಿದೆ.

1973ರಲ್ಲಿ ಸ್ಥಾಪನೆ

ಸ್ವಿಫ್ಟ್ ಅನ್ನು 1973 ರಲ್ಲಿ ಸ್ಥಾಪಿಸಲಾಯಿತು ಮತ್ತು ಬೆಲ್ಜಿಯಂನಲ್ಲಿ ಇದರ ಕೇಂದ್ರ ಕಚೇರಿ ಇದೆ.  ಇದು US ಫೆಡರಲ್ ರಿಸರ್ವ್ ಸಿಸ್ಟಮ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ನ್ಯಾಷನಲ್ ಬ್ಯಾಂಕ್ ಆಫ್ ಬೆಲ್ಜಿಯಂನಿಂದ ಮೇಲ್ವಿಚಾರಣೆ ನಡೆಸಲ್ಪಡುತ್ತದೆ‌.

ಇದೆಯೇ  ಹಿಂದಿನ ಉದಾಹರಣೆ?

ಇರಾನಿನ ಪರಮಾಣು  ಕಾರ್ಯಕ್ರಮದ ಮೇಲಿನ  ನಿರ್ಬಂಧದ ಭಾಗವಾಗಿ 2012 ರಲ್ಲಿ SWIFT ನಿಂದ ನಿಷೇಧಕ್ಕೆ ಒಳಗಾಗಿತ್ತು. ಇದರಿಂದ ಆ ದೇಶದ ಅನೇಕ ಬ್ಯಾಂಕುಗಳು ಸಾಕಷ್ಟು ನಷ್ಟಕ್ಕೀಡಾಗಬೇಕಾಯ್ತು. ನಿಷೇಧದಿಂದಾಗಿ ಇರಾನ್  ದೇಶವು ತನ್ನ ತೈಲ ರಫ್ತು ಆದಾಯದ ಅರ್ಧದಷ್ಟು ಮತ್ತು ವಿದೇಶಿ ವ್ಯಾಪಾರದ 30 ಪ್ರತಿಶತವನ್ನು ಕಳೆದುಕೊಂಡು ನಷ್ಟ ಅನುಭವಿಸಿತ್ತು.

ನಿರ್ಬಂಧದಿಂದ ರಷ್ಯಾ  ಮೇಲೆ ಬೀರುವ ಪರಿಣಾಮಗಳೇನು?

-ಸ್ವಿಫ್ಟ್‌ ನಿಂದ ನಿರ್ಬಂಧಿಸಿದರೆ ರಷ್ಯಾ ಆರ್ಥಿಕತೆ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ. ರಷ್ಯಾವು ರಫ್ತು ಮತ್ತು ಅಮದು ವ್ಯವಹಾರಗಳಲ್ಲಿ ವಿದೇಶಗಳಿಗೆ ಹಣ ವರ್ಗಾಯಿಸಲು ಕಷ್ಟವಾಗುತ್ತದೆ.

-SWIFT ನಿಂದ ರಷ್ಯಾವನ್ನು ಹೊರಗಿಡುವುದರಿಂದ   ರಷ್ಯಾದ ಬ್ಯಾಂಕುಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ರಷ್ಯಾದೊಂದಿಗೆ ವ್ಯಾಪಾರ ನಡೆಸುವ ಇತರ ದೇಶಗಳ ಮೇಲೂ ಅದರ ಪರಿಣಾಮ ಬೀರುತ್ತದೆ. ರಫ್ತುದಾರರು ರಷ್ಯಾಕ್ಕೆ ಸರಕುಗಳನ್ನು ಮಾರಾಟ ಮಾಡುವುದು ಅಪಾಯಕಾರಿ ಮತ್ತು ಹೆಚ್ಚು ದುಬಾರಿಯಾಗಲಿದೆ.

-ರಷ್ಯಾದ ಸರಕುಗಳ ವಿದೇಶಿ ಖರೀದಿದಾರರು ಸಹ ಹೆಚ್ಚು ಸಂಕಷ್ಟ ಎದುಬೀರುತ್ತದೆ.

-ಪರ್ಯಾಯ ಪೂರೈಕೆದಾರರನ್ನು ಹುಡುಕಲೂ ಆರಂಭಿಸಬಹುದು.

-ಇದಲ್ಲದೆ, SWIFT ನಿಂದ ರಷ್ಯಾದ ಬ್ಯಾಂಕುಗಳ ಮೇಲಿನ ನಿಷೇಧವು ಜರ್ಮನಿ ಮತ್ತು ಇಟಲಿಯ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರುತ್ತದೆ.

ಜರ್ಮನಿ ಮತ್ತು ಇಟಲಿ ಎರಡೂ ರಷ್ಯಾದಿಂದ ಆಮದು ಮಾಡಿಕೊಳ್ಳುವ ಅನಿಲದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದ್ದರಿಂದ SWIFT ನಿಂದ ಸಂಪೂರ್ಣ ರಷ್ಯಾದ ಹಣಕಾಸು ವ್ಯವಸ್ಥೆಯನ್ನು ಹೊರಗಿಡುವುದರಿಂದ ಉಭಯ ದೇಶಗಳು ತಮ್ಮ ಗ್ಯಾಸ್ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗಲ್ಲ.

ರಷ್ಯದ ಪರ್ಯಾಯ ಮತ್ತು ಚೀನಾ ಆಯಾಮ

ಈ ಹಿಂದೆ ೨೦೧೪ ರಲ್ಲಿ ರಷ್ಯಾ ಉಕ್ರೇನಿನ ಭಾಗವಾಗಿದ್ದ ಕ್ರಿಮಿಯಾವನ್ನು ವಶಕ್ಕೆ ಪಡೆದಾಗಲೂ ರಷ್ಯದ ಕೆಲವು ಸಂಸ್ಥೆಗಳಿಗೆ ಸ್ವಿಫ್ಟ್ ನಿರ್ಬಂಧ ಹೇರಲಾಗಿತ್ತು. ಆಗಿನಿಂದಲೂ ರಷ್ಯಾ ಪರ್ಯಾಯ ಮಾರ್ಗ ವಾಗಿ ಎಸ್ ಪಿಎಸ್ ಎಫ್ (ಸಿಸ್ಟಂ ಫಾರ್ ಟ್ರಾನ್ಸಫರ್ ಆಫ್ ಫೈನಾನ್ಶಿಯಲ್ ಮೆಸೇಜಸ್) ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಇದುವರೆಗೂ ರಷ್ಯಾದ 400 ಬ್ಯಾಂಕುಗಳು ಈ ವ್ಯವಸ್ಥೆ ಅಳವಡಿಸಿಕೊಂಡಿವೆ.

ಇದಕ್ಕಿಂತ ದೊಡ್ಡ ಆಸಕ್ತಿಕರ ಬೆಳವಣಿಗೆ ಏನೆಂದರೆ ಚೀನಾ 2015ರಲ್ಲಿ ಸ್ವಿಫ್ಟ್ ಗೆ ಪರ್ಯಾಯವಾದ ‘ಸಿಪ್ಸ್’ -ಕ್ರಾಸ್ ಬಾರ್ಡರ್ ಇಂಟರ್ ಬ್ಯಾಂಕ್ ಪೇಮೆಂಟ್ ಸಿಸ್ಟಂ ಜಾರಿಗೆ ತಂದಿದೆ. ಇದು ಡಾಲರಿಗೆ ಬದಲಾಗಿ ತನ್ನ ಕರೆನ್ಸಿಯನ್ನು ಅಂತಾರಾಷ್ಟ್ರೀಯಗೊಳಿಸುವ ಯತ್ನವೂ ಹೌದು.

ಇದೀಗ ಯುರೋಪಿನ ಸ್ವಿಫ್ಟ್ ನಿರ್ಬಂಧವನ್ನೆದುರಿಸುವುದಕ್ಕೆ ರಷ್ಯಾ ಮತ್ತು ಚೀನಾ ಒಂದುಗೂಡಿ ತಮ್ಮದೇ ಪರ್ಯಾಯ ವ್ಯವಸ್ಥೆ ಎದ್ದುನಿಲ್ಲಿಸಿಬಿಡಬಹುದಾ ಎಂಬುದು ವಿಶ್ಲೇಷಕರಿಗಿರುವ ಒಂದು ಕುತೂಹಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!