ಹೊಸದಿಗಂತ ವರದಿ,ಮಂಡ್ಯ:
ಪರಂಪರೆಯ ಪ್ರತೀಕವಾಗಿರುವ ಸನಾತನ ಧರ್ಮ ವಿನೂತನ ಹಾಗೂ ನೂತನ ಧರ್ಮವಾಗಿದೆ ಇದರ ವಿಭಿನ್ನ ಸಂಸ್ಕೃತಿ ಉಳಿಸಬೇಕಾಗಿದೆ ಎಂದು ಕನ್ನಡದ ವಾಗ್ಮಿ ಹಿರೇಮಗಳೂರು ಕಣ್ಣನ್ ತಿಳಿಸಿದರು.
ನಗರದ ಹರ್ಡಿಕರ್ ಭವನದಲ್ಲಿ ಪತ್ರಕರ್ತ ಗಣಂಗೂರು ನಂಜೇಗೌಡರ ಶ್ರೀರಂಗಪಟ್ಟಣದ ಪ್ರಾಚೀನ ದೇಗುಲಗಳು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. 0
ಸನಾತನ ಧರ್ಮ ಮತ್ತು ಜಾತಿ ನಿರ್ಮೂಲನೆ ಆಂದೋಲನ ನಡೆಸುವುದಾಗಿ ಸಾಹಿತಿ ಭಗವಾನ್ ಹೇಳಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರು ಚಿಕಾಗೋಗೆ ತೆರಳಲು ಧನಸಂಗ್ರಹಿಸಿ ಸಹಾಯ ಮಾಡಿದ ಚಿಕ್ಕಮಗಳೂರಿನ ಅರಸಿಂಗ ಪೆರುಮಾಳ್ ಪತ್ನಿ ಶ್ರೀ ರಂಗಮ್ಮ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರಾಗಿದ್ದು, ಇವರು ವಿವೇಕಾನಂದರಿಗೆ ಆರೈಕೆ ಮಾಡಿದ್ದಾರೆ, ಇವರ ಕುರಿತು ಕೃತಿ ರಚನೆಯಾಗುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎಂದರು.
ದೇವಾಲಯಗಳು ಸಾಂಸ್ಕೃತಿಕ ಕೇಂದ್ರ ಹಾಗಾಗಿ ಇವುಗಳನ್ನು ಪುರಾಣ ಮಾಡಬೇಡಿ ಬದಲಾಗಿ ಇತಿಹಾಸವನ್ನಾಗಿಸಿ, ಜನಸಾಮಾನ್ಯರಿಗೆ ದೇವಾಲಯಗಳನ್ನು ಪರಿಚಯಿಸಿ ಸುಮಧುರ ತಾಣವನ್ನಾಗಿ ಮಾಡಬೇಕಾಗಿದೆ ಎಂದರು.
ರಾಜ್ಯದ ಪ್ರತಿ ದೇವಾಲಯಗಳ ಎದುರು ದೇವಾಲಯದ ಮಾಹಿತಿಯ ಫಲಕಗಳನ್ನು ಹಾಕಿಅದರ ಸುತ್ತಳತೆ,ವಿನ್ಯಾಸ, ನಿರ್ಮಾಣದ ಮಾಹಿತಿ, ಪೂಜೆ ಪುನಸ್ಕಾರ ಜೊತೆಗೆ ದೇವಾಲಯದ ಸಮಗ್ರ ಇತಿಹಾಸವುಳ್ಳ ಕೈಪಿಡಿಯನ್ನು ನೀಡಬೇಕು, ವಿಶೇಷವಾಗಿ ದೇವಾಲಯದ ಸುತ್ತಲೂ ಏನಿರಬೇಕು,ಏನಿರಬಾರದು ಎಂಬುದನ್ನು ತಿಳಿಯಬೇಕಾಗಿದೆ ಎಂದು ಹೇಳಿದರು.