ವಿವಿಧ ದೇವಾಲಯಗಳಲ್ಲಿ ಕಳವು: ಆರೋಪಿಗಳ ಬಂಧನ, 1.19 ಲಕ್ಷ ರೂ. ವೌಲ್ಯದ ವಸ್ತುಗಳ ವಶ

ಹೊಸದಿಗಂತ ವರದಿ,ಮದ್ದೂರು :

ಮಂಡ್ಯ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಭಕ್ತರ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದ ಮೈಸೂರು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಬೆಸಗರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲೂಕಿನ ಸೋಸಲೆ ಹೋಬಳಿ, ಎಸ್. ಕೆಚ್ಚೆಹುಂಡಿ ಗ್ರಾಮದ ನಂಜುಂಡನಾಯಕನ ಪುತ್ರ ಟಾಟಾ ಏಸ್ ಚಾಲಕ ಮಹೇಶ್ (27) ಹಾಗೂ ಮೂಗೂರು ಗ್ರಾಮದ ಲೇ. ಮಲ್ಲನಾಯಕನ ಪುತ್ರ ಎಂ. ಗೋವಿಂದನಾಯಕ (43) ಬಂಧಿತ ಆರೋಪಿಗಳು.
ಬಂಧಿತರಿಂದ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕಳವು ಮಾಡಿದ್ದ 100 ಗ್ರಾಂ ತೂಕದ ಚಿನ್ನಾಭರಣ ಮತ್ತು 4 ಕೆ.ಜಿ. ತೂಕದ ಬೆಳ್ಳಿ ವಸ್ತುಗಳು, 21 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳು ಮತ್ತಿತರ ವಸ್ತುಗಳು ಸೇರಿದಂತೆ ಒಟ್ಟು 8.19 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಕಳೆದ 2023ರ ಸೆಪ್ಟೆಂಬರ್ 23ರಂದು ಬೆಸಗರಹಳ್ಳಿ ಗ್ರಾಮದ ಆದಿಶಕ್ತಿ ದೇವಸ್ಥಾನಕ್ಕೆ ಬೈಕ್‌ನಲ್ಲಿ ಬಂದ ಆರೋಪಿಗಳು, ಭಕ್ತರ ಸೋಗಿನಲ್ಲಿ ಪ್ರವೇಶ ಮಾಡಿ 1.600 ಕೆ.ಜಿ. ವೌಲ್ಯದ ಎರಡು ಚಿನ್ನದ ತಾಳಿ, ಚಿನ್ನದ ಕಾಸು, ಬೆಳ್ಳಿ ಜೋಡಿ ಮುಖವಾಡ ಹಾಗೂ ಚಿನ್ನಾಭರಣಗಳನ್ನು ದೋಚಿದ್ದರು.
ಈ ಬಗ್ಗೆ ದೇಗುಲದ ಅರ್ಚಕ ಬಿ.ಎಲ್. ನಾಗರಾಜು ಬೆಸಗರಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಪತ್ತೆಗೆ ಎಸ್.ಪಿ. ಎನ್. ಯತೀಶ್, ಎಎಸ್ಪಿ ಸಿ. ತಿಮ್ಮಯ್ಯ, ಡಿವೈಎಸ್ಪಿ ವಿ. ಕೃಷ್ಣಪ್ಪ ಮದ್ದೂರು ಗ್ರಾಮಾಂತರ ಇನ್ಸ್‌ಪೆಕ್ಟರ್ ವೆಂಕಟೇಗೌಡ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಲ್ಲಪ್ಪ ಸಂಗಪ್ಪ ಕಂಬಾರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಎ.ಎಸ್.ಐ. ಕರೀಗೌಡ, ಸಿಬ್ಬಂದಿಗಳಾದ ಶ್ರೀಕಾಂತ್, ಸಿದ್ದೇಗೌಡ, ಗಂಗಾಧರ್, ಚಿರಂಜೀವಿ, ಕಿರಣ್‌ಕುಮಾರ್, ಕಿಶೋರ್, ಪ್ರದೀಪ್, ಲೋಕೇಶ್ ಮತ್ತು ರವಿಕಿರಣ್ ಅವರುಗಳು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಮೈಸೂರು ಜಿಲ್ಲೆಯ ಟಿ. ನರಸೀಪುರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಂಡ್ಯ ಜಿಲ್ಲೆಯ ದೇಗುಲಗಳಲ್ಲಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇವರ ವಿರುದ್ದ ಬೆಸಗರಹಳ್ಳಿ, ಅರಕೆರೆ, ಬನ್ನೂರು, ಬೆಳಕವಾಡಿ, ಮಳವಳ್ಳಿ ಗಾಮಾಂತರ ಸಾತನೂರು ದೇವಾಲಯಗಳಲ್ಲಿ ಕಳವು ಮಾಡಿರುವ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಂತರ ಆರೋಪಿಗಳಿಂದ 8.19 ಲಕ್ಷ ರೂ. ವೌಲ್ಯದ ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರಿಯಾಂಕ ಅವರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!