Friday, March 31, 2023

Latest Posts

ಐತಿಹಾಸಿಕ ದೇವಾಲಯ ಶ್ರೀ ಅಶ್ವತ್ಥನಾರಾಯಣ ಕ್ಷೇತ್ರವನ್ನೊಮ್ಮೆ ಇಣುಕಿ ನೋಡಿ!

ತ್ರಿವೇಣಿ ಗಂಗಾಧರಪ್ಪ

ನಾವು ಇವತ್ತು ನಿಮಗೆ ಒಂದು ಐತಿಹಾಸಿಕ ದೇವಾಲಯದ ಪರಿಚಯ ಮಾಡಿಕೊಡುತ್ತೇವೆ. ಈ ಸ್ಥಳಕ್ಕೆ ಒಂದು ಮಹತ್ತರವಾದ ಸ್ಥಾನ ಇದೆ. ಮೈ ನವಿರೇಳಿಸುವಂತಹ ಇತಿಹಾಸವೂ ಇದೆ. ರಾಜ-ಮಹಾರಾಜರು, ಮಹಾಋಷಿಗಳು ನೆಲೆಸಿದಂತಹ ಬೀಡಿದು. ಸದಾ ಪ್ರವಾಸಿಗರು ಹಾಗೂ ಭಕ್ತರಿಂದ ತುಂಬಿ ತುಳುಕುವ ಆ ಮಹಿಮೆಯುಳ್ಳ ಸ್ಥಳ ʻವಿದುರಾಶ್ವತ್ಥʼ

ವಿದುರಾಶ್ವತ್ಥ ಈ ಹೆಸರೇ ಹಾಗೆ ಅದರದೇ ಆದ ದೈವ ಸಂಪತ್ತನ್ನು ಹೊಂದಿದೆ. ಇಲ್ಲಿಗೆ ಈ ಹೆಸರು ಹೇಗೆ ಬಂತು ಅಂತ ಗೊತ್ತಾ?
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿರುವ ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಸ್ಥಳ ವಿದುರಾಶ್ವತ್ಥ. ಗೌರಿಬಿದನೂರಿನ ಉತ್ತರಕ್ಕೆ ಸುಮಾರು 6 ಕಿಮೀ ದೂರದಲ್ಲಿದೆ. ದ್ವಾಪರಯುಗದ ಕೊನೆಯ ಚರಣದಲ್ಲಿ ಮಹಾಭಾರತ ಬರೆದ ವ್ಯಾಸ ಮಹರ್ಷಿಗಳ ಪುತ್ರ ವಿದುರರು, ಮೈತ್ರೇಯ ಮುನಿಗಳ ಸಲಹೆಯಂತೆ ನೆಟ್ಟು ಬೆಳೆಸಿದರೆಂದೂ ಹೇಳಲಾಗುವ ಬೃಹದಾಕಾರದ ಅಶ್ವತ್ಥ ಮರವಿದೆ. ಹೀಗಾಗೇ ಈ ಊರಿಗೆ ವಿದುರಾಶ್ವತ್ಥ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇನ್ನೂ ಒಂದು ಕಡೆ ಸ್ವತಃ ಮೈತ್ರೇಯಿ ಮುನಿಗಳೇ ಈ ವೃಕ್ಷ ನೆಟ್ಟಿದ್ದಾರೆ ಅಂತ ಹೇಳಲಾಗುತ್ತೆ.

ಕೌರವ ಪಾಂಡವರ ನಡುವೆ ದಾಯಾದಿ ಮತ್ಸರವುಂಟಾಗಿ ಪಾಂಡವರು ವನವಾಸಕ್ಕೆ ಹೋದಾಗ, ಕೌರವರ ದುರ್ನಡತೆಯಿಂದ ಬೇಸತ್ತ ವಿದುರ ತೀರ್ಥಯಾತ್ರೆಗೆ ಹೊರಟರಂತೆ. ಆ ಸಂದರ್ಭದಲ್ಲಿ ಮೈತ್ರೇಯ ಮುನಿಗಳು ಉತ್ತರ ಪಿನಾಕಿನಿ ನದಿಯ ಕಡೆಗೆ ತೀರ್ಥಯಾತ್ರೆ ಹೊರಟಾಗ, ಅವರ ಜೊತೆಯಲ್ಲಿ ವಿದುರನೂ ಹೊರಡುತ್ತಾನೆ. ಸಂಧ್ಯಾಕಾಲದಲ್ಲಿ ಮುನಿಗಳು ನದಿಯಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಅಶ್ವತ್ಥವೃಕ್ಷದ ಸಸಿಯೊಂದು ನೀರಿನಲ್ಲಿ ತೇಲುತ್ತಾ ಬಂದು ಅವರಿಗೆ ಸಿಗುತ್ತದೆ. ತ್ರಿಕಾಲ ಜ್ಞಾನಿಗಳದ ಮುನಿಗಳು ಅದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸಿ, ನದೀ ತೀರದಲ್ಲಿ ನೆಟ್ಟು ನೀರೆರೆಯುವಂತೆ ವಿದುರನಿಗೆ ಸೂಚಿಸುತ್ತಾರೆ. ಆ ಸಸಿಯೊಳಗೆ ಮೈತ್ರೆಯರು ತ್ರಿಮೂರ್ತಿಗಳನ್ನು ಆವಾಹನೆಗೊಳಿಸುತ್ತಾರೆ. ಅದನ್ನು ಭಕ್ತಿ , ಶ್ರದ್ಧೆಯಿಂದ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆಗಿನಿಂದ….

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣು ರೂಪಿಣಿ,
ಅಗ್ರತಃ ಶಿವರೂಪಾಯ ವೃಕ್ಷ ರಾಜಾಯತೇ ನಮಃ
ಎಂದು ವಿದುರರು ಭಕ್ತಿಯಿಂದ ಆ ವೃಕ್ಷವನ್ನು ಪೂಜಿಸುತ್ತಾ ಅಲ್ಲಿಯೇ ಇದ್ದುಬಿಡುತ್ತಾನೆ. ಕಾಲಕ್ರಮೇಣ, ಅದು ದೊಡ್ಡ ವೃಕ್ಷವಾಗಿ ಬೆಳೆಯುತ್ತದೆ. ವಿದುರನು ಅದನ್ನು ಪೂಜಿಸುತ್ತಲೇ ಮೋಕ್ಷ ಪಡೆದನಾದ್ದರಿಂದ, ಈ ಸ್ಥಳವನ್ನು “ವಿದುರಾಶ್ವತ್ಥ” ಕ್ಷೇತ್ರವೆಂದು ಕರೆಯಲಾಗಿದೆ. ಶಾಸನ – ಪುರಾಣಗಳಲ್ಲೂ, ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ

ಈ ವೃಕ್ಷದ ಸುತ್ತ ಪ್ರಾಕರವಿದ್ದು, ಪಕ್ಕದಲ್ಲೇ ಅಶ್ವತ್ಥನಾರಾಯಣನ ದೇಗುಲವಿದೆ. ದೇವಾಲಯದ ಮೇಲೆ ಮೂರು ಗೋಪುರ ಗೂಡುಗಳಿವೆ. ಇಲ್ಲಿ ನಾರಾಯಣನ ಗಾರೆಯ ವಿಗ್ರಹವಿದೆ. ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮೊದಲು ಅಭಿಷ್ಟ ಸಿದ್ಧ ಗಣಪತಿ ದರ್ಶನವಾಗುತ್ತದೆ. ಅಮೃತ ಶಿಲೆಯಿಂದ ಕೆತ್ತಲಾಗಿರುವ ಬಲಮುರಿ ಗಣಪನ ಮೂರ್ತಿ ಸುಂದರವಾಗಿದೆ. ಪಕ್ಕದಲ್ಲೇ ಇರುವ ಅಶ್ವತ್ಥನಾರಾಯಣ ಗುಡಿ ಪ್ರಧಾನವಾದದ್ದು. ಇಲ್ಲಿ ಭವಾನಿಶಂಕರ, ಶ್ರೀರಾಮ, ವೀರಾಂಜನೇಯಸ್ವಾಮಿ, ಶ್ರೀದೇವಿ, ಭೂದೇವಿ ದೇವಾಲಯಗಳೂ ಇವೆ. ದೇವಾಲಯಗಳಿವೆ. ಈ ಅಶ್ವತ್ಥನಾರಾಯಣನಿಗೆ ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ದೊಡ್ಡ ಜಾತ್ರೆ ನೆರೆಯುತ್ತದೆ.

ಇನ್ನೂ ಇಲ್ಲಿಗೆ ಬರುವ ಭಕ್ತರು ಈ ಅಶ್ವತ್ಥ ವೃಕ್ಷವನ್ನು ಪೂಜಿಸದೆ ಹೋಗುವುದೇ ಇಲ್ಲ. ಮದುವೆಯಾಗದವರು, ಮಕ್ಕಳಾಗದವರು, ನಾಗದೋಷ ಇರುವವರು, ಹರಕೆ ಹೊತ್ತು ಈ ಮರದ ಕೆಳಗೆ ಹಾಗೂ ಈ ಪ್ರದೇಶದಲ್ಲಿ ಪಾಪ ಪರಿಹಾರಾರ್ಥ ಪ್ರತಿಷ್ಠಾಪಿಸಿರುವ ಸಾವಿರಾರು ನಾಗರಕಲ್ಲುಗಳಿವೆ. ಇಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಪ್ರತಿಷ್ಠಾಪಿತ ನಾಗರಕಲ್ಲುಗಳೇ ಕಾಣುತ್ತವೆ. ಆಂಧ್ರಪ್ರದೇಶ ಹಾಗೂ ಕರ್ನಾಟಕದ ನೂರಾರು ಭಕ್ತರು ನಿತ್ಯ ಇಲ್ಲಿಗೆ ಆಗಮಿಸಿ ವೃಕ್ಷವನ್ನು ಹಾಗೂ ಇಲ್ಲಿರುವ ದೇವರುಗಳನ್ನು ಪೂಜಿಸುತ್ತಾರೆ. ನಾಗರಕಲ್ಲುಗಳಿಗೆ ಜಲಾಭಿಷೇಕ, ಹಾಲಿನ ಅಭಿಷೇಕ ಮಾಡುತ್ತಾರೆ. ಹರಿಶಿನ ಕುಂಕುಮ, ಪುಷ್ಪಗಳಿಂದ ಪೂಜಿಸುತ್ತಾರೆ. ನಾಗರಕಲ್ಲು ಪ್ರತಿಷ್ಠಾಪನೆ ಮಾಡಲು ಶಕ್ತರಲ್ಲದವರು ಇಲ್ಲಿ ವಿದುರರು ತಪವನ್ನು ಆಚರಿಸಿದ ಅರಳಿಮರ ಅಥವಾ ಅಶ್ವತ್ಥವೃಕ್ಷಕ್ಕೆ 108 ಪ್ರದಕ್ಷಿಣೆ ಹಾಕಿದರೂ ಪಾಪ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ. ನಾಗರಪಂಚಮಿಯ ದಿನ ಇಲ್ಲಿ ಜನಜಾತ್ರೆಯೇ ನಡೆಯುತ್ತದೆ. ಈ ಪವಿತ್ರ ತಾಣದಲ್ಲಿ ನಾಗರ ಪ್ರತಿಷ್ಠೆ ಮಾಡಿರುವವರೂ ಅಂದು ಇಲ್ಲಿಗೆ ಬಂದು ತನಿ ಎರೆಯುವ ಪದ್ಧತಿ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!