ಹೊಸದಿಗಂತ ಡಿಜಿಟಲ್ ಡೆಸ್ಕ್
ಚೀನಾ ಸೇರಿದಂತೆ ವಿದೇಶಿ ಪ್ರವಾಸಿಗರು ವಾಸ್ತವ್ಯ ಹೂಡಿದ್ದ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಹೋಟೆಲ್ ಮೇಲೆ ಸೋಮವಾರ ಶಸ್ತ್ರ ಸಜ್ಜಿತ ಉಗ್ರರಿಂದ ದಾಳಿ ನಡೆದಿತ್ತು, ಕೂಡಲೇ ಮೂವರು ದಾಳಿಕೋರರನ್ನು ಹತ್ಯೆ ಮಾಡಲಾಗಿದೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಪ್ಪಿಸಿಕೊಳ್ಳಲು ಕಿಟಕಿಯಿಂದ ಜಿಗಿದ ಇಬ್ಬರು ವಿದೇಶಿ ನಿವಾಸಿಗಳು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಸ್ಫೋಟಗಳು ಮತ್ತು ಗುಂಡಿನ ದಾಳಿಯ ಫೋಟೊಗಳನ್ನು ಅಲ್ಲಿನ ನಿವಾಸಿಗಳು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಫೋಟೋಗಳು ಮತ್ತು ವಿಡಿಯೋಗಳು ಕಟ್ಟಡದಿಂದ ಹೊಗೆ ಏರುತ್ತಿರುವುದನ್ನು ತೋರಿಸಿದೆ.
“ಇಲ್ಲಿಯವರೆಗೆ, ನಾವು 21 ಸಾವುನೋವುಗಳ ವರದಿ ಸ್ವೀಕರಿಸಿದ್ದೇವೆ – ಉಗ್ರರು ಹೋಟೆಗೆ ಆಗಮಿಸುವಾಗಲೇ ಮೂವರನ್ನು ಕೊಂದಿದ್ದಾರೆ” ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ. ದಾಳಿಯು ಹಲವಾರು ಗಂಟೆಗಳ ಕಾಲ ನಡೆಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಲಿಬಾನ್ ಪಡೆಗಳು ಪ್ರದೇಶಕ್ಕೆ ಧಾವಿಸಿ ಸ್ಥಳಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಿವೆ ಎಂದು ಪೊಲೀಸ್ ಮುಖ್ಯ ವಕ್ತಾರ ಜದ್ರಾನ್ ಹೇಳಿದ್ದಾರೆ.
ಚಿನಾ ಅತಿಥಿ ಗೃಹದ ಬಳಿಯೇ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ. ದಾಳಿಯ ಹೊಣೆಯನ್ನು ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ. ಇದು ಇಸ್ಲಾಮಿಕ್ ಸ್ಟೇಟ್ ಗುಂಪಿನ ಪ್ರಾದೇಶಿಕ ಅಂಗಸಂಸ್ಥೆ ಮತ್ತು ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್‌ನ ಪ್ರತಿಸ್ಪರ್ಧಿ ಯಾಗಿದ್ದು, ಕಳೆದ ವರ್ಷ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ತನ್ನ ದಾಳಿಯನ್ನು ಹೆಚ್ಚಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ