ಏ.20 ರಂದು ತಾಲೂಕು ಮಟ್ಟದ ಆರೋಗ್ಯ ಮೇಳ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಹೊಸದಿಗಂತ ವರದಿ ಮಡಿಕೇರಿ:‌

ಮಡಿಕೇರಿ ಜಿಲ್ಲೆಯಲ್ಲಿ ಏ.20ರಂದು ತಾಲೂಕು ಮಟ್ಟದ ಆರೋಗ್ಯ ಮೇಳ ನಡೆಯಲಿದೆ. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ನಿರ್ದೇಶಿಸಿದ್ದಾರೆ. ಮೇಳಕ್ಕೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಸಮನ್ವಯ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಮೇಳ ಬಗ್ಗೆ ತಾಲೂಕು ಮಟ್ಟದಲ್ಲಿಯೂ ಮಾಹಿತಿ ನೀಡುವಂತಾಗಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಹಂತದ ವೈದ್ಯಾಧಿಕಾರಿಗಳು ತಂಡಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಆಯುಷ್ಮಾನ್ ಆರೋಗ್ಯ ಕಾರ್ಯಕ್ರಮದಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಗೂ ಪೌರ ಕಾರ್ಮಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಮೇಳದಲ್ಲಿ ಮಳಿಗೆ ತೆರೆಯಲು ಅವಕಾಶ ಕಲ್ಪಿಸಬೇಕು ಹಾಗೂ ಪೋಷಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಒದಗಿಸುವ ಮಳಿಗೆ ತೆರೆಯಲು ಸೂಕ್ತ ಕ್ರಮ ವಹಿಸಬೇಕೆಂದು ಡಿಸಿ ಮಾಹಿತಿ ನೀಡಿದರು.

ಆರೋಗ್ಯ ಮೇಳದಲ್ಲಿ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ರಕ್ತದೊತ್ತಡ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು ಹಾಗೂ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ವೆಂಕಟೇಶ್ ಹೇಳಿದರು. ಈ ಮೇಳದಲ್ಲಿ ಹೆಸರು ನೋಂದಣಿ , ಎನ್‍ಸಿಡಿ ಮತ್ತು ಟಿಬಿ ಸ್ಕ್ರೀನಿಂಗ್, ಆರೋಗ್ಯ ಶಿಕ್ಷಣದ ಬಗ್ಗೆ ಆಪ್ತ ಸಮಾಲೋಚನೆ, ಆಯುಷ್ ಕ್ಲಿನಿಕ್, ವೈದ್ಯಕೀಯ ಆರೈಕೆ, ಪ್ರಯೋಗಾಲಯ ಮತ್ತು ವಿಕಿರಣ ಸೇವೆಗಳು, ಔಷಧ ವಿತರಣೆ, ಆಯುಷ್ ಔಷಧ ವಿತರಣೆ ಹಾಗೂ ಆರೋಗ್ಯ ಸೇವೆಗಳ ಜಾಗೃತಿ ಸೇರಿದಂತೆ ವಿವಿಧ ಮಳಿಗೆಗಳು ಇರಲಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!