ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಇಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ, ನಗರ ವಲಯಗಳ ಅಭಿವೃದ್ಧಿ, ಪ್ರವಾಹ ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡಿ, ರೈತರ ಸಾಲ ಮನ್ನಾ ಘೋಷಣೆ ಮಾಡಿದೆ.
ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಬಜೆಟ್ ಮಂಡಿಸಿದ್ದು,ರಾಜ್ಯದಲ್ಲಿನ ರೈತರಿಗೆ ಸ್ಟಾಲಿನ್ ಸರ್ಕಾರದ ಬಜೆಟ್ನಲ್ಲಿ ಭರ್ಜರಿ ಘೋಷಣೆ ಮಾಡಿದ್ದು, 2,531 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಉಳಿದಂತೆ 1,000 ಕೋಟಿ ಜುವೆಲ್ಲರಿ ಸಾಲ ಮನ್ನಾ ಮಾಡಲಾಗಿದ್ದು, ಸ್ವಸಹಾಯ ಸಂಘಗಳ 600 ಕೋಟಿ ಸಾಲ ಮನ್ನಾ ಮಾಡುವ ಭರವಸೆ ನೀಡಲಾಗಿದೆ.
ಪಾದರಕ್ಷೆ ಮತ್ತು ಚರ್ಮ ಉದ್ಯಮದ ಅಭಿವೃದ್ಧಿಗೆ ಹೊಸ ನೀತಿ, ರಫ್ತು ಸಂಸ್ಥೆಗಳ ಸಾರ್ವಜನಿಕ ಮೂಲಸೌಕರ್ಯ ನಿರ್ಮಿಸಲು 100 ಕೋಟಿ ವಿಶೇಷ ನಿಧಿ, ಹೊಸ ಮೈಕ್ರೋ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ, ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಪೂರಕ ಮತ್ತು ಕೊಯಮತ್ತೂರಿನಲ್ಲಿ ತೆಂಗಿನಕಾಯಿ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅನುದಾನ ಮೀಸಲಿಡಲಾಗಿದೆ.
ಪ್ರವಾಹ ತಡೆಗೆ 2,800 ಕೋಟಿ ರೂ., . ಲಂಡನ್ ಕ್ಯೂ ಗಾರ್ಡನ್ ಸಹಭಾಗಿತ್ವದಲ್ಲಿ ಚೆನ್ನೈನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಸಸ್ಯೋದ್ಯಾನ ನಿರ್ಮಾಣ ಮಾಡುವುದಾಗಿ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕಾಗಿ 36,895 ಕೋಟಿ ರೂ. ಮೀಸಲಿಡಲಾಗಿದ್ದು, ಶಾಲಾ ಮಕ್ಕಳ ಶಿಕ್ಷಣಕ್ಕಾಗಿ 5,668 ಕೋಟಿ ರೂ. ಮೀಸಲಿಟ್ಟಿದ್ದು, 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಪಠ್ಯಪುಸ್ತಕ, ನೋಟ್ಬುಕ್, ಶಾಲಾ ಕಿಟ್ಸ್ ನೀಡಲು ನಿರ್ಧರಿಸಲಾಗಿದೆ ಎಂದರು.