ಹೊಸದಿಗಂತ ಡಿಜಿಟಲ್ ಡೆಸ್ಕ್;
ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ನಟಿ ನಮಿತಾಗೆ ಅವಮಾನವಾಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಧಾರ್ಮಿಕ ಸಚಿವ ಪಿ.ಕೆ. ಶೇಖರ್ ಬಾಬು ಪ್ರತಿಕ್ರಿಯೆ ನೀಡಿದ್ದು, ನಟಿ ನಮಿತಾಗೆ ಅವಮಾನವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ತಿಳಿಸಿದರು.
ಚೆನ್ನೈನ ಪುರುಷವಾಕ್ಕಂ ಗಂಗಾಧರೇಶ್ವರ ದೇವಾಯದ ನವೀಕರಣ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಪಳನಿ ದೇವಸ್ಥಾನದಲ್ಲಿ ಇದೇ ರೀತಿಯ ಘಟನೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಪ್ರಕಾರ ನಮಿತಾ ಮುಸ್ಲಿಂ ಧರ್ಮಕ್ಕೆ ಸೇರಿರಬಹುದೆಂಬ ಅನುಮಾನದಿಂದ ದೇವಸ್ಥಾನದ ಸಿಬ್ಬಂದಿ ಈ ರೀತಿ ನಡೆದುಕೊಂಡಿರಬಹುದು ಎಂದರು.
ನಮಿತಾ ಎದುರಿಸಿದ ಘಟನೆಯ ಬಗ್ಗೆ ಆಯುಕ್ತರು ತನಿಖೆಗೆ ಆದೇಶಿಸಿದ್ದು, ಆಕೆಗೆ ಮಾನಸಿಕವಾಗಿ ತೊಂದರೆಗೀಡಾಗಿದ್ದರೆ ಅಥವಾ ಕಾನೂನಿಗೆ ವಿರುದ್ಧವಾಗಿ ಏನಾದರೂ ನಡೆದಿದ್ದರೆ, ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ದೇವಸ್ಥಾನಕ್ಕೆ ಹೋಗಿದ್ದ ವೇಳೆ ಅಲ್ಲಿನ ಸಿಬ್ಬಂದಿ ತಡೆದು ನಿಲ್ಲಿಸಿದ್ದು, ನೀವು ಯಾವ ಧರ್ಮದವರು ಎಂದು ಪ್ರಶ್ನೆ ಮಾಡಿ ಅವಮಾನಿಸಿದ್ದಾರೆ ಎಂದು ನಟಿ ನಮಿತಾ ಆರೋಪಿಸಿದ್ದರು.