ಹೊಸದಿಗಂತ ಡಿಜಿಟಲ್ ಡೆಸ್ಕ್;
ನಿವೃತ್ತ ಶಿಕ್ಷಕಿಯೊಬ್ಬರು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದ ವೇಳೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಾಲಹಳ್ಳಿಯ ಏರ್ ಫೋರ್ಸ್ ಈಸ್ಟ್ 7 ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರುವ ಆಟದ ಮೈದಾನದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ವಾಯುಸೇನೆ ಸಿಬ್ಬಂದಿಯ ಅತ್ತೆ, 75 ವರ್ಷದ ರಾಜ್ದುಲಾರಿ ಸಿನ್ಹಾ ಅವರ ಮೇಲೆ ಸುಮಾರು ಏಳೆಂಟು ಬೀದಿ ನಾಯಿಗಳು ಹಠಾತ್ ದಾಳಿ ನಡೆಸಿದ್ದು, ತಲೆ ಹಿಂಬದಿ, ಮುಖ, ಕೈ, ಕತ್ತಿನ ಭಾಗವನ್ನು ಶ್ವಾನಗಳು ಕಚ್ಚಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯ ಅಳಿಯ ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಳಿಯ ಮತ್ತು ಮಗಳನ್ನು ನೋಡಲು ಮಹಿಳೆ ಬಿಹಾರದಿಂದ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು.
ಈ ಹಿಂದೆಯೂ ಇದೇ ಕ್ಯಾಂಪಸ್ ನಲ್ಲಿ ನಾಲ್ಕೈದು ಜನರ ಮೇಲೆ ನಾಯಿಗಳು ದಾಳಿ ನಡೆಸಿತ್ತು.ಈ ಕುರಿತು ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.