July 20, 2026
Monday, July 20, 2026
spot_img

ಕಾವೇರಿ ನೀರಿಗಾಗಿ ತಮಿಳುನಾಡು ಪಟ್ಟು: ಜು.22 ರಂದು ಹೈವೋಲ್ಟೇಜ್ CWMA ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾವೇರಿ ನದಿ ನೀರು ಹಂಚಿಕೆ ಹಾಗೂ ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಗೆ ನೆರೆರಾಜ್ಯ ತಮಿಳುನಾಡು ಮತ್ತೆ ತಗಾದೆ ತೆಗೆದಿದೆ. ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಡಿಎಂಕೆ (DMK) ಪಕ್ಷದ ಸಂಸದರು ಈ ವಿಷಯವನ್ನು ಮುಂಚೂಣಿಗೆ ತಂದರು. ಡಿಎಂಕೆ ಸಂಸದೀಯ ಮಂಡಳಿ ನಾಯಕರಾದ ಟಿ.ಆರ್. ಬಾಲು ಅವರು ಮೇಕೆದಾಟು ಯೋಜನೆ ವಿರುದ್ಧ ನಿಲುವಳಿ ಸೂಚನೆ ಮಂಡಿಸಿ, ತಕ್ಷಣವೇ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದರು. ಆದರೆ, ಸ್ಪೀಕರ್ ಓಂ ಬಿರ್ಲಾ ಅವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದಾಗ, ಆಕ್ರೋಶಗೊಂಡ ತಮಿಳುನಾಡು ಸಂಸದರು ಸದನದ ಬಾವಿಗಿಳಿದು ಜೋರಾಗಿ ಪ್ರತಿಭಟನೆ ನಡೆಸಿದರು.

ಬುಧವಾರ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ

ಮತ್ತೊಂದೆಡೆ, ತೀವ್ರ ಬರಗಾಲದ ಪರಿಸ್ಥಿತಿ ಇದ್ದಾಗಲೂ ತಮಿಳುನಾಡು ತನಗೆ ನೀರು ಬಿಡಬೇಕೆಂದು ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಜುಲೈ 22ರ ಬುಧವಾರದಂದು ನವದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಉನ್ನತ ಮಟ್ಟದ ತುರ್ತು ಸಭೆಯನ್ನು ಕರೆಯಲಾಗಿದೆ.

ಸಿಡಬ್ಲ್ಯುಎಂಎ ಅಂಗಳಕ್ಕೆ ವಿವಾದ

ಕಳೆದ ವಾರವಷ್ಟೇ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಕರ್ನಾಟಕದಿಂದ ನೀರು ಹರಿಸುವಂತೆ ಯಾವುದೇ ಕಟ್ಟುನಿಟ್ಟಿನ ಆದೇಶ ನೀಡಿರಲಿಲ್ಲ. ಈ ನಿರ್ಧಾರದಿಂದ ತಮಿಳುನಾಡು ಸರ್ಕಾರ ತೀವ್ರ ಅಸಮಾಧಾನಗೊಂಡಿದ್ದು, ಸಿಡಬ್ಲ್ಯುಆರ್​ಸಿಗಿಂತ ಹೆಚ್ಚು ಅಧಿಕಾರ ಹೊಂದಿರುವ ಉನ್ನತ ಪ್ರಾಧಿಕಾರವಾದ ‘ಸಿಡಬ್ಲ್ಯುಎಂಎ’ ಸಭೆಗೆ ಒತ್ತಾಯಿಸಿತ್ತು. ಈಗ ಕೇಂದ್ರ ಜಲ ಆಯೋಗದ ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಲಿರುವ ಈ ಸಭೆಯು ಉಭಯ ರಾಜ್ಯಗಳ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !