January17, 2026
Saturday, January 17, 2026
spot_img

ತಮಿಳುನಾಡಿನ ಹೊಸೂರು ವಿಮಾನ ನಿಲ್ದಾಣ ನಿರ್ಮಾಣ ಆಸೆಗೆ ತಣ್ಣೀರು: ಉಡಾನ್‌ ಪಟ್ಟಿಯಿಂದ ಯೋಜನೆಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದ ತಮಿಳುನಾಡು ಸರ್ಕಾರದ ಕೇಂದ್ರ ಸರಕಾರ ಶಾಕ್ ನೀಡಿದ್ದು, ಅದನ್ನು ಉಡಾನ್‌ ಪಟ್ಟಿಯಿಂದ ಹೊರಗಿಟ್ಟಿದೆ.

ಹೊಸೂರು ಸಮೀಪದ ಶೂಲಗಿರಿಯಲ್ಲಿ 2,300 ಎಕರೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ತಮಿಳುನಾಡು ರಾಜ್ಯಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಕೇಂದ್ರದ ಪರವಾನಗಿ ಸಿಗುವುದು ಬಾಕಿಯಿದೆ. ಆದರೆ ಉಡಾನ್‌ ನಿಯಮದ ಪ್ರಕಾರ, ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ಒಳಗಿರುವ ಪ್ರದೇಶದಲ್ಲಿ ಇನ್ನೊಂದು ಏರ್‌ಪೋರ್ಟ್‌ ನಿರ್ಮಾಣ ಮಾಡುವಂತಿಲ್ಲ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊಸೂರು ಕೇವಲ 80 ಕಿ.ಮೀ. ದೂರವಿರುವ ಕಾರಣ, ಒಪ್ಪಂದದ ಪ್ರಕಾರ 2033ರ ವರೆಗೆ ಅಲ್ಲಿ ಏರ್‌ಪೋರ್ಟ್‌ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಉಡಾನ್‌ ಪಟ್ಟಿಯಲ್ಲಿ ಹೊಸೂರು ನಿಲ್ದಾಣ ಜಾಗ ಕೈಬಿಡಲಾಗಿದೆ.

ಆದರೆ ತಮಿಳುನಾಡಿನ ವೆಲ್ಲೂರು ಮತ್ತು ನೆಯ್ವೇಲಿಯಲ್ಲಿ ತಲೆಯೆತ್ತಲಿರುವ ವಿಮಾನ ನಿಲ್ದಾಣಗಳನ್ನು ಪರಿಗಣಿಸಲಾಗಿದೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ಉದ್ಯಮ ಚಟುವಟಿಕೆಗಳು, ಟ್ರಾಫಿಕ್‌ನಂತಹ ಕಾರಣಗಳನ್ನು ನೀಡಿ ತನ್ನ ಯೋಜನೆ ಕೈಬಿಡಲು ನಿರಾಕರಿಸಿದ್ದು, ಬಿಐಎಎಲ್‌ ಜತೆ ಮಾತುಕತೆಗೆ ಮುಂದಾಗಿದೆ. ತಮಿಳುನಾಡು ಹೊಸೂರು ಯೋಜನೆಗೆ ಉಡಾನ್ ನಿಧಿಯನ್ನು ಪಡೆಯುತ್ತಿಲ್ಲ ಎಂದು ಕೂಡ ಹೇಳಿದೆ.

ಉಡಾನ್ ಯೋಜನೆಯ ಬಿಡ್‌ಗಳಿಂದ ಹೊರಗೆ
ಕೇಂದ್ರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನಡುವಿನ 2004 ರ ಒಪ್ಪಂದದಲ್ಲಿನ ಷರತ್ತಿನಿಂದಾಗಿ ಹೊಸೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಟ್ಟಲು ತಮಿಳುನಾಡು ಸರ್ಕಾರಕ್ಕೆ ಸಾಧ್ಯವಿಲ್ಲ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ (ಕೆಐಎ) 150 ಕಿ.ಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಮೇ 2033 ರವರೆಗೆ ತಡೆಹಿಡಿಯಬೇಕೆಂಬ ನಿಯಮವಿದೆ. ಅಥವಾ ಮೇಲ್ದರ್ಜೆಗೇರಿಸಿದ ವಿಮಾನ ನಿಲ್ದಾಣಗಳನ್ನು ಮೇ 2033 ರಲ್ಲಿ ಅದರ 25 ನೇ ವಾರ್ಷಿಕೋತ್ಸವದವರೆಗೆ ನಿಷೇಧಿಸುತ್ತದೆ. ತಮಿಳುನಾಡು ಭೂಸ್ವಾಧೀನ ಮತ್ತು ಸ್ಥಳ ಅನುಮತಿಗೆ ಮುಂದಾಗಿದ್ದಾಗ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಈ ನಿರ್ಬಂಧವನ್ನು ದೃಢಪಡಿಸಿದೆ. ಉಡಾನ್ ಯೋಜನೆಯ ಬಿಡ್‌ಗಳಿಂದ ಹೊರಗಿಟ್ಟಿದೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೂ 2033 ರ ಮೊದಲು ಕಾರ್ಯಾಚರಣೆ ನಡೆಸಲು ತಮಿಳುನಾಡು ಸರ್ಕಾರಕ್ಕೆ ಸಾಧ್ಯವಿಲ್ಲ.

Must Read

error: Content is protected !!