Thursday, March 30, 2023

Latest Posts

ವಲಸಿಗ ಕೆಲಸಗಾರರ ಬಿಕ್ಕಟ್ಟಿಗೆ ತತ್ತರಿಸಿದೆ ತಮಿಳುನಾಡು!

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ತಮಿಳುನಾಡಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ರೆಸ್ಟೊರೆಂಟ್ ಗಳು, ನಿರ್ಮಾಣ ಉದ್ದಿಮೆಗಳು ಕಳೆದೆರಡು ದಿನಗಳಿಂದ ದಿಕ್ಕೆಟ್ಟು ಕುಳಿತಿವೆ. ಕಾರಣವೇನೆಂದರೆ, ಇಲ್ಲೆಲ್ಲ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕೆಲಸಗಾರರು ಕೆಲಸಕ್ಕೇ ಬರುತ್ತಿಲ್ಲ; ಇನ್ನು ಕೆಲವರು ತಮ್ಮ ರಾಜ್ಯಕ್ಕೆ ಮರಳಿದ್ದಾರೆ. ಹಿಂದಿ ವಿರೋಧದ ಕಾರಣದಿಂದ ತಮ್ಮ ಮೇಲೆ ದಾಳಿಗಳಾಗುತ್ತಿವೆ ಎಂದು ಆರೋಪಿಸಿ ಇವರೆಲ್ಲ ಕೆಲಸಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹಿಂದಿ ಭಾಷಿಕರ ಮೇಲೆ ತಮಿಳುನಾಡಿನಲ್ಲಿ ದ್ವೇಷದ ಹಲ್ಲೆಯಾಗಿದೆ ಎಂದು ತೋರಿಸುವ ವಿಡಿಯೊ ಕ್ಲಿಪ್ ಒಂದು ಸಾಮಾಜಿಕ ಮಾಧ್ಯಮದ ಮೂಲಕ ಹಲವರ ಮೊಬೈಲ್ ಫೋನಿನಲ್ಲಿ ಹರಿದಾಡಿದ್ದೇ ಇದಕ್ಕೆ ಕಾರಣ. ಈ ವಿಡಿಯೋ ತಿರುಚಲಾಗಿರುವಂಥದ್ದು, ಅಂಥ ಯಾವುದೇ ಘಟನೆ ನಡೆದಿಲ್ಲ ಎಂದು ತಮಿಳುನಾಡಿನ ಸರ್ಕಾರ ಮತ್ತು ಕಾನೂನು ಪಾಲನೆಯ ಏಜೆನ್ಸಿಗಳು ಹೇಳುತ್ತಿವೆ.

ಹಿಂದಿಯಲ್ಲಿ ಪತ್ರ!

ತಮಿಳುನಾಡಿನಲ್ಲಿ ವಲಸಿಗ ಕೆಲಸಗಾರರಿಲ್ಲದೇ ಕೈಗಾರಿಕೆಗಳ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಒತ್ತಡಕ್ಕೆ ಒಳಗಾಗಿರುವ ಅಲ್ಲಿನ ಡಿಎಂಕೆ ಸರ್ಕಾರವು ಹಿಂದಿಯಲ್ಲೇ ಪತ್ರ ಬರೆದು ವಲಸಿಗ ಕೆಲಸಗಾರರಿಗೆ ಮೊರೆ ಇಟ್ಟಿದೆ. ತಮಿಳು ಐಡೆಂಟಿಟಿ ಮತ್ತು ಭಾಷೆಯ ಸುತ್ತಲೇ ರಾಜಕಾರಣ ಮಾಡುವ ಡಿಎಂಕೆಯಿಂದ ಇಂಥದೊಂದು ನಡೆ ಪ್ರಕಟವಾಗಿರುವುದು ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ಸೂಚಿಸುತ್ತಿದೆ ಎಂಬುದು ಪರಿಣತರು ಮಾಡುತ್ತಿರುವ ವಿಶ್ಲೇಷಣೆ.

ಬಿಹಾರ ವಿಧಾನಸಭೆಯಲ್ಲಿ ಸಹ ತಮ್ಮ ರಾಜ್ಯದ ವಲಸಿಗ ಕಾರ್ಮಿಕರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾದದ್ದರಿಂದ ಇದು ರಾಷ್ಟ್ರೀಯ ಸ್ಥರದಲ್ಲಿ ಸುದ್ದಿಯಾಗಿದೆ. ಬಿಹಾರ ಮತ್ತು ಜಾರ್ಖಂಡ ನಿಯೋಗಗಳು ತಮಿಳುನಾಡಿನಲ್ಲಿ ಪರಿಸ್ಥಿತಿ ಪರಿಶೀಲನೆಗೆ ಬಂದಿವೆ.

“ವಲಸಿಗ ಕಾರ್ಮಿಕರನ್ನು ಥಳಿಸುವ ಯಾವುದೇ ಘಟನೆಗಳು ವಾಸ್ತವದಲ್ಲಿ ವರದಿ ಆಗಿಲ್ಲ. ಇದು ಭಯ ಹಬ್ಬಿಸುವುದಕ್ಕೆ ಹರಡಿರುವ ಸುಳ್ಳು ಸುದ್ದಿ. ತಮಿಳುನಾಡು ಆತಿಥ್ಯದ ನೆಲ. ಬಿಹಾರದ ಕೆಲಸಗಾರರ ದುಡಿಮೆ ರಾಜ್ಯದ ಕೈಗಾರಿಕೆಗಳಿಗೆ ಯೋಗದಾನ ಕೊಟ್ಟಿದೆ. ಅವರಿಗೆ ಅಗತ್ಯ ಎಲ್ಲ ಸುರಕ್ಷತೆಗಳನ್ನೂ ಒದಗಿಸಲಾಗಿದ್ದು, ವದಂತಿಗಳಿಗೆ ಕಿವಿಗೊಟ್ಟು ಕೆಲಸಗಾರರು ರಾಜ್ಯ ತೊರೆಯಬಾರದು” ಎಂದು ಸರ್ಕಾರ ತನ್ನ ಪತ್ರದಲ್ಲಿ ವಿನಂತಿಸಿಕೊಂಡಿದೆ.

ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಸಹ “ಯಾರೂ ಆತಂಕಕ್ಕೆ ಒಳಗಾಗುವ ಸ್ಥಿತಿ ಇಲ್ಲ. ತಮಿಳುನಾಡಿನ ಜನ ಸ್ನೇಹಶೀಲರು” ಎನ್ನುವ ಮೂಲಕ ವಲಸಿಗ ಕೆಲಸಗಾರರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಿದ್ದಾರೆ.

ಬಿಜೆಪಿಯ ನಿಲುವೇನು?

ಹಿಂದಿ ದ್ವೇಷದ ಕಾರಣದಿಂದ ತಮಿಳುನಾಡಿನಲ್ಲಿ 12 ಮಂದಿ ಬಿಹಾರದ ಕೆಲಸಗಾರರನ್ನು ಹತ್ಯೆ ಮಾಡಲಾಗಿದೆ ಎಂಬ ಸುಳ್ಳುಸುದ್ದಿಯೇ ಎಲ್ಲ ಕೋಲಾಹಲಗಳಿಗೆ ಮೂಲ ಕಾರಣ. ಈ ಸುದ್ದಿ ಹರಡಿದ್ದಕ್ಕೆ ದೈನಿಕ್ ಭಾಸ್ಕರ್ ಪತ್ರಿಕೆ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ ಬಿಜೆಪಿಯ ಪ್ರಶಾಂತ್ ಉಮ್ರಾವ್ ಎಂಬ ಉತ್ತರ ಭಾರತೀಯ ಸದಸ್ಯ ಸಹ ಒಬ್ಬರು. ಅವರು ಈ ಬಗ್ಗೆ ಟ್ವೀಟ್ ಮಾಡಿ ನಂತರ ಅಳಿಸಿ ಹಾಕಿದ್ದರು.
ಬಿಹಾರದ ಕೆಲಸಗಾರರ ಹತ್ಯೆಯಾಗಿದೆ ಎಂಬ ಸುದ್ದಿ ಸುಳ್ಳು ಎಂಬುದನ್ನು ತಮಿಳುನಾಡು ಬಿಜೆಪಿ ಸಹ ಪ್ರತಿಪಾದಿಸಿದೆ. “ಈ ವಿಷಯದಲ್ಲಿ ರಾಜಕೀಯವಿಲ್ಲ. ಬಿಹಾರದ ಬಿಜೆಪಿ ನಾಯಕರು ತಮಗೆ ಕರೆ ಮಾಡಿದಾಗಲೂ, ಇಲ್ಲಿನ ವಲಸಿಗ ಕೆಲಸಗಾರರು ಸುರಕ್ಷಿತವಾಗಿದ್ದಾರೆ ಎಂದೇ ಹೇಳಿದ್ದೇನೆ” ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಆದರೆ, ಡಿಎಂಕೆ ಲಾಗಾಯ್ತಿನಿಂದಲೂ ಉತ್ತರ ಭಾರತೀಯರ ವಿರುದ್ಧ ಹೇಳಿಕೆಗಳನ್ನು ಕೊಡುತ್ತ ಸ್ಥಳೀಯರಲ್ಲಿ ಅವರ ವಿರುದ್ಧ ದ್ವೇಷ ಭಾವನೆ ಹರಡುವುದಕ್ಕೆ ಪ್ರಚೋದಿಸುತ್ತಿದೆ. ಉತ್ತರ ಭಾರತೀಯರು ಪಾನಿಪೂರಿ ಮಾಡುವುದಕ್ಕಷ್ಟೆ ಲಾಯಕ್ಕು, ಅವರ ಮಿದುಳಲ್ಲಿ ಬುದ್ಧಿ ಇರುವುದಿಲ್ಲ ಎಂಬೆಲ್ಲ ಮಾತುಗಳನ್ನು ಈ ಹಿಂದೆ ಡಿಎಂಕೆಯ ಪ್ರಮುಖ ನಾಯಕರೇ ವೇದಿಕೆ ಮೇಲಿನಿಂದ ರಾಜಾರೋಷವಾಗಿ ಹೇಳಿದ್ದಾರೆ. ಹೀಗಾಗಿ, ವಲಸಿಗ ಕೆಲಸಗಾರರು ವದಂತಿಗಳನ್ನು ನಂಬಿ ಆತಂಕಿತರಾಗಿರುವುದಕ್ಕೆ ಅಂಥ ಸ್ಥಿತಿ ನಿರ್ಮಿಸಿರುವ ಡಿಎಂಕೆಯೇ ಕಾರಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!