ಆಂತರಿಕ ಭದ್ರತೆ ಸವಾಲೊಡ್ಡುವವರಿಗೆ ಕಾನೂನು ಪಾಠ ಬೋಧಿಸಿ: ಗೃಹ ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ವರದಿ, ಕಲಬುರಗಿ:

ನೆಲದ ಕಾನೂನಿಗೆ ವಿರುದ್ಧವಾಗಿ ನಡೆಯುವ ಮತ್ತು ಆಂತರಿಕ ಭದ್ರತೆಗೆ ಸವಾಲೊಡ್ಡುವ ದುಷ್ಟಶಕ್ತಿಗಳಿಗೆ ಕಾನೂನು ಪಾಠ ಬೋಧಿಸಬೇಕು ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಕರೆ ನೀಡಿದರು.

ಶನಿವಾರ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ 1ನೇ ತಂಡದ ಪ್ರೊ. ಡಿಎಸ್‍ಪಿ/ 10ನೇ ತಂಡದ ಪ್ರೊ. ಪಿ.ಎಸ್.ಐ (ಸಿವಿಲ್), 6ನೇ ತಂಡದ ಆರ್.ಎಸ್.ಐ./ ಸ್ಪೆಷಲ್ ಆರ್.ಎಸ್.ಐ./ 6ನೇ ತಂಡದ ಪಿ.ಎಸ್.ಐ. (ನಿಸ್ತಂತು) ಹಾಗೂ 2ನೇ ತಂಡದ ಪಿ.ಎಸ್.ಐ. (ಎಫ್.ಪಿ.ಬಿ.) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಸಮಾರಂಭದಲ್ಲಿ ಭಾಗವಹಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದ 1 ಲಕ್ಷ ಪೊಲೀಸ್ ಬಲಕ್ಕೆ ಇಂದು 288 ಜನ ಪೊಲೀಸ್ ಅಧಿಕಾರಿಗಳಾದ ನೀವು ಹೊಸ ಶಕ್ತಿಯಾಗಿ ಸೇರ್ಪಡೆಯಾಗುತ್ತಿದ್ದು, ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವಜನಿಕರ ಆಸ್ತಿ-ಪಾಸ್ತಿ, ಪ್ರಾಣಿ ಹಾನಿ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಯಾವುದೇ ಜಾತಿ-ಧರ್ಮಕ್ಕೆ ಸರ್ವರ ಕಲ್ಯಾಣಕ್ಕಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕರ್ನಾಟಕ ಪೊಲೀಸ್‍ಗೆ ದೇಶದಲ್ಲಿ ಅತ್ಯುನ್ನತವಾದ ಸ್ಥಾನವಿದೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಹೊಸದಾಗಿ ಸೇರ್ಪೆಯಾಗುವ ಪೆÇಲೀಸರ ಮೇಲಿದೆ. ಪೊಲೀಸ್ ಠಾಣೆಗೆ ಹೋದರೆ ಗೌರವ ಸಿಗುವುದಿಲ್ಲ ಎಂಬ ಸಾಮಾನ್ಯ ದೂರು ಸಾರ್ವಜನಿಕರದ್ದಾಗಿದೆ. ಠಾಣೆಗೆ ನ್ಯಾಯ ಕೇಳಿ ಬರುವ ಅಸಹಾಯಕರಿಗೆ, ಬಡವರಿಗೆ ನ್ಯಾಯ ಒದಗಿಸುವ, ಅಭಯ ನೀಡುವ ಮತ್ತು ಅವರನ್ನು ಗೌರಯುತವಾಗಿ ನಡೆದುಕೊಳ್ಳುವ ಕರ್ತವ್ಯ ನಿಮ್ಮದಾಗಿದೆ ಎಂದರು.

ನಮ್ಮ ಸರ್ಕಾರ ಬರುವ ಮುನ್ನ 1 ಲಕ್ಷ ಪೊಲೀಸ್ ಬಲದಲ್ಲಿ 35 ಸಾವಿರ ಹುದ್ದೆಗಳು ಖಾಲಿ ಇದ್ದವು. ಕಳೆದ ಮೂರು ವರ್ಷದಲ್ಲಿ ಪಿ.ಎಸ್.ಐ, ಎ.ಎಸ್.ಐ, ವೈಜ್ಣಾನಿಕ ಅಧಿಕಾರಿ, ಕ್ರೈಮ್ ಅಧಿಕಾರಿ, ಪೇದೆ ಒಟ್ಟು 16,811 ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ 2022-23 ರಲ್ಲಿ 4,500 ಪೇದೆ, 300 ಪಿ.ಎಸ್.ಐ. ನೇಮಕಾತಿ ಮಾಡಿಕೊಳ್ಳಲು ಈಗಾಗಲೆ ಅನುಮತಿ ನೀಡಲಾಗಿದೆ ಎಂದರು.

80 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ರಾಜ್ಯದ 156 ಪೊಲೀಸ್ ಠಾಣೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ 14 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 725 ದ್ವಿಚಕ್ರ, 125 ನಾಲ್ಕು ಚಕ್ರ ಸೇರಿದಂತೆ 1,890 ವಾಹನಗಳನ್ನು ಇಲಾಖೆಗೆ ಖರೀದಿಸಲಾಗಿದೆ. 11 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಕಳೆದ 3 ವರ್ಷದಲ್ಲಿ ಪೊಲೀಸ್ ಇಲಾಖೆಯ ಮೂಲಸೌಕರ್ಯ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿ ಇಲಾಖೆಗೆ ಹೊಸ ಚೈತನ್ಯ ನೀಡಲಾಗಿದೆ ಎಂದರು.

ರಾಜ್ಯದ ಶಾಂತಿ ಮತ್ತು ಸುವ್ಯಸ್ಥೆ ಕಾಪಾಡಲು ಹಗಲಿರುಳು ಕಾರ್ಯನಿರ್ವಹಿಸುವ ಪೊಲೀಸರ ಕಲ್ಯಾಣದ ಜವಾಬ್ದಾರಿ ಸರ್ಕಾರದ್ದಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರ ಚಿಕಿತ್ಸೆಗಾಗಿ 111 ಕೋಟಿ ರೂ. ಮೀಸಲಿಡಲಾಗಿದೆ. ರಾಜ್ಯದ 180 ಆಯ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಹೊಸದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 3 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಮಾನಸಿಕ ಒತ್ತಡ ನಿವಾರಣೆಗೆ ಯೋಗ, ಧ್ಯಾನಕ್ಕೂ ಆದ್ಯತೆ ನೀಡಲಾಗಿದೆ ಎಂದರು.

ದೇಶದ ಗಡಿಯಲ್ಲಿ ಶತ್ರುವಿನ ವಿರುದ್ಧ ಹೋರಾಡುವ ಸೈನಿಕರ ಕೆಲಸ ಮಾಡು ಇಲ್ಲವೇ ಮಡಿಯಾದರೆ, ಒಳನಾಡಿನಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಕಾರ್ಯ ವಿಭಿನ್ನವಾಗಿದೆ. ಆಂತರಿಕವಾಗಿ ಸಮುದಾಯದೊಂದಿಗಿದ್ದು, ದುಷ್ಟಶಕ್ತಿಗಳ ವಿರುದ್ಧ ಲಾಠಿ ಬೀಸಬೇಕಿದೆ. ಇತ್ತೀಚೆಗೆ ಕೆಲ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯ ನಡವಳಿಕೆಯಿಂದ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸಮಾಜ ಸೇವೆಗೆ ಅಣಿಯಾಗಿರುವ ಪ್ರಶಿಕ್ಷಣಾರ್ಥಿಗಳು ಅಪರಾಧಿಗಳನ್ನು ಬಂಧಿಸುವೆ, ಆದರೆ ಅಪರಾಧಿಯಾಗಲಾರೆ ಎಂಬ ಸಂಕಲ್ಪ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ನಾನೇಂದ್ರ ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!