ಶಿಕ್ಷಕ-ಪದವಿಧರ ಕ್ಷೇತ್ರಗಳ ಚುನಾವಣೆ; ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಲು ಕರೆ

ಹೊಸದಿಗಂತ ವರದಿ, ಚಿಕ್ಕೋಡಿ: 

ಮುಂದಿನ ತಿಂಗಳು ನಡೆಯಲಿರುವ ಶಿಕ್ಷಕ ಮತ್ತು ಪದವಿಧರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಶಾಸಕರು, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹೆಚ್ಚು ಶ್ರಮ ವಹಿಸಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ಎಚ್ಚರ ವಹಿಸಬೇಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ‌ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಜಯಪ್ರಕಾಶ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ರಾಜ್ಯ ಘಟಕದ ಅಧ್ಯಕ್ಷರಷ್ಟೇ ಬೂತ್ ಮಟ್ಟದ ಪೇಜ ಪ್ರಮುಖರೂ ಕೂಡ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಠಿಣ ಪರಿಶ್ರಮ ವಹಿಸಿ ಚುನಾವಣಾ ಕಾರ್ಯ ನಿರ್ವಹಿಸಿದ್ದರಿಂದಲೇ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.

ರಾಜ್ಯದಲ್ಲಿಯೂ ಸಹ ಕೇವಲ 10 ತಿಂಗಳ ಅವಧಿಯಲ್ಲಿಯೇ ವಿಧಾನ ಸಭಾ ಚುನಾವಣೆಗಳು ನಡೆಯಲಿದ್ದು, ಈಗಿನಿಂದಲೇ ಕೇವಲ ಪದಾಧಿಕಾರಿಗಳಷ್ಟೇ ಅಲ್ಲ ಪ್ರತಿಯೊಬ್ಬ ಕಾರ್ಯಕರ್ತನೂ ಕೂಡ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಆಗ ಮಾತ್ರ ಬಿಜೆಪಿ ಅಭ್ಯರ್ಥಿಗಳ ಗೆಲುವು ತಡೆಯಲು ಸಾಧ್ಯವೇ ಇಲ್ಲ. ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಅನುಸರಿಸಿದ ಚುನಾವಣಾ ಹಾಗೂ ಸಂಘಟನಾತ್ಮಕ ತಂತ್ರಗಳನ್ನೇ ನಮ್ಮ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿಯೂ ಸಹ ಅನುಸರಿಸಿದಲ್ಲಿ 150 ಕ್ಕೂ ಹೆಚ್ಚು ಗೆಲುವು ಸಾಧಿಸಲು ಸಾಧ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಚ ಡಾ.ರಾಜೇಶ್ ನೇರ್ಲಿ, ಇತ್ತೀಚಿಗೆ ಹೊಸಪೇಟೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ‌ ನಿರ್ಣಯಿಸಿದಂತೆ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲೆಯ ಪದಾಧಿಕಾರಿಗಳಿಗೆ ಮನವಿ ಮಾಡಿದರು.

ಕೊಳಗೇರಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ, ಬೆಳಗಾವಿ ಜಿಲ್ಲೆ ಬಿಜೆಪಿಯ ಶಕ್ತಿ ಕೇಂದ್ರದಂತಿದ್ದು, ಮುಂದಿನ ಚುನಾವಣೆಯಲ್ಲಿಯೂ ಸಹ ಬೆಳಗಾವಿ ಜಿಲ್ಲೆಯ 15 ಸ್ಥಾನಗಳಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಚುನಾವಣೆಯಲ್ಲಿ‌ ಬೂತ್ ಮಟ್ಟದ ಪೇಜ್ ಪ್ರಮುಖರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಮಾರೋಪ ಭಾಷಣ ಮಾಡಿದರು.
ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶಾಂಭವಿ ಅಶ್ವಥಪುರ ವರ್ಗ ಗೀತೆ ಹಾಡಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ ಸ್ವಾಗತಿಸಿದರು, ಚಿಕ್ಕೋಡಿ-ಸದಲಗಾ ಮಂಡಲ ಅಧ್ಯಕ್ಷ ಸಂಜಯ ಪಾಟೀಲ ನಿರೂಪಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ ಮಾತ‌ನಾಡಿದರು. ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದುಂಡಪ್ಪ ಬೆಂಡವಾಡೆ, ಜಿಲ್ಲಾ ಸಹ ಪ್ರಭಾರಿ ರಮೇಶ ದೇಶಪಾಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪಾ ಖೋಕಲೆ, ಸಾಮಾಜಿಕ ಜಾಲತಾಣ ಜಿಲ್ಲಾ ಚಾಲಕ ಪ್ರಸಾದ ಪಚಂಡಿ,ಸೇರಿದಂತೆ ಜಿಲ್ಲೆಯ ಕಾರ್ಯಕಾರಿಣಿ ಸದಸ್ಯರು, ಪ್ರಕೋಷ್ಠಗಳ ಸಂಚಾಲಕರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!