ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಅಕ್ಟೋಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಸಮನ್ಸ್ ನೀಡಿದೆ.
ಮನರೇಗಾ ಯೋಜನೆ ಅಡಿ ರಾಜ್ಯಕ್ಕೆ ನೀಡಬೇಕಿದ್ದ ಅನುದಾನ ತಡೆಹಿಡಿದಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ದೆಹಲಿಯಲ್ಲಿ ನಡೆಯಲಿರುವ ಪಕ್ಷದ ಪ್ರತಿಭಟನೆಯ ದಿನವೇ ಕಾಕತಾಳೀಯವಾಗಿ ಇ.ಡಿ. ವಿಚಾರಣೆಗೆ ಕರೆದಿದೆ ಎಂದು ಅಭಿಷೇಕ್ ತಿಳಿಸಿದ್ದಾರೆ.
ಪ್ರತಿಭಟನೆ ಬಗ್ಗೆ ಬಿಜೆಪಿಗಿರುವ ಭಯವು ಇ.ಡಿ. ಸಮನ್ಸ್ ಮೂಲಕ ಪ್ರಕಟವಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಮಹತ್ವದ ಸಭೆಯ ದಿನವೇ ನನಗೆ ವಿಚಾರಣೆಗೆ ಹಾಜರಾಗಲು ಕಾಕತಾಳೀಯವಾಗಿ ಇ.ಡಿ. ಸಮನ್ಸ್ ನೀಡಿತ್ತು. ನಾನು ವಿಚಾರಣೆಗೆ ಹಾಜರಾಗಿದ್ದೆ ಎಂದು ಹೇಳಿದ್ದಾರೆ.