ಮಕ್ಕಳ ಕೃತ್ಯಕ್ಕೂ ಶಿಕ್ಷಕರನ್ನು ದೂಷಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಲೆಯಲ್ಲಿ ಮಕ್ಕಳು ಮಾಡುವ ಪ್ರತಿಯೊಂದು ಕೃತ್ಯಕ್ಕೂ ಶಿಕ್ಷಕ ಅಥವಾ ಮುಖ್ಯೋಪಾಧ್ಯಾಯರನ್ನು ದೂಷಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

17 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ ಸಂಬಂಧಪಟ್ಟ ಪ್ರಕರಣದಲ್ಲಿ ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣ್ಯಂ ಅವರ ಪೀಠವು ಈ ಮಾತನ್ನು ಹೇಳಿದೆ.

ಆತ್ಮಹತ್ಯೆಯಂತಹ ಘಟನೆಗಳು ನಡೆದಾಗ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಪೋಷಕರು, ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರನ್ನು ಮಾತ್ರ ದೂಷಿಸುವಂತಿಲ್ಲ. ಶಿಕ್ಷಕರು ಅಥವಾ ಮುಖ್ಯೋಪಾಧ್ಯಾಯರು ದೈಹಿಕ ಶಿಕ್ಷೆ ವಿಧಿಸಿದ್ದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬಹುದು. ಯಾಕೆಂದರೆ ದೈಹಿಕ ಶಿಕ್ಷೆಯನ್ನು ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದೆ.

ಯಾವಾಗಲೂ ಶಿಕ್ಷಕರು ಮಾನಹಾನಿ ಮಾಡುತ್ತಾರೆ ಎಂದು ಒಪ್ಪಲು ಸಾಧ್ಯವಿಲ್ಲ. ಒಂದ್ ವೇಳೆ ಅವರ ದುರ್ನಡತೆ, ಅನುಚಿತ ವರ್ತನೆ ಅಥವಾ ಇನ್ನಾವುದೇ ರೀತಿಯಲ್ಲಿ ತಪ್ಪು ಗಳ ಕುರಿತು ಸಾಕ್ಷ್ಯಾಧಾರಗಳ ಮೂಲಕ ದೃಢಪಟ್ಟರೆ ಮಾತ್ರ ಜವಾಬ್ದಾರರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

2017 ರಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರ ಚಿತ್ರಹಿಂಸೆಯಿಂದಾಗಿಯೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 10 ಲಕ್ಷ ಪರಿಹಾರದ ಜೊತೆಗೆ ಶಾಲೆ ಮತ್ತು ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಕೋರಿದ್ದರು.

ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸುತ್ತಿದ್ದರು. ಅಸಹ್ಯ ಭಾಷೆಯಲ್ಲಿ ನಿಂದಿಸುತ್ತಾ ಅವರನ್ನು ನಿರ್ದಯವಾಗಿ ಥಳಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಇಲಾಖೆಯನ್ನು ಪ್ರತಿನಿಧಿಸುವ ವಿಶೇಷ ಸರ್ಕಾರಿ ಅರ್ಜಿದಾರರು ಈ ಆರೋಪಕ್ಕೆ ಆಕ್ಷೇಪಣೆ ಸಲ್ಲಿಸಿದರು.

ಮುಖ್ಯೋಪಾಧ್ಯಾಯರು ಶಾಲೆಯಲ್ಲಿನ ಮಕ್ಕಳಲ್ಲಿ ಶಿಸ್ತು ಕಾಪಾಡುತ್ತಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳ ಹೇರ್‌ ಕಟಿಂಗ್‌ಗೆ ಮುಖ್ಯೋಪಾಧ್ಯಾಯರು ತಾವೇ ಹಣ ಪಾವತಿಸುತ್ತಿದ್ದುದು ಬಯಲಾಗಿದೆ. ಚೆನ್ನೈನ ಶಾಲಾ ಶಿಕ್ಷಣ ನಿರ್ದೇಶಕರ ಆದೇಶದ ಮೇರೆಗೆ ಅಧಿಕಾರಿಗಳು ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿದರು. ಈ ವೇಳೆ ಮಹಿಳೆಯ ಆರೋಪ ನಿರಾಧಾರ ಎಂಬುದು ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!