ಆರ್ಶದೀಪ್ ಸಿಂಗ್‌ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಗರಂ: ಯುವ ವೇಗಿನ ಬೆಂಬಲಕ್ಕೆ ನಿಂತ ಪಾಕ್ ಮಾಜಿ ಕ್ರಿಕೆಟಿಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ಎದುರು ಭಾರತ ನಿನ್ನೆ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಸೋಲಿಗೆ ಯುವ ವೇಗದ ಬೌಲರ್‌ ಆರ್ಶದೀಪ್‌ ಸಿಂಗ್ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

23 ವರ್ಷದ ಯುವ ಎಡಗೈ ವೇಗದ ಬೌಲರ್‌ ಆರ್ಶದೀಪ್ ಸಿಂಗ್, ಪಾಕಿಸ್ತಾನ ಎದುರು 3.5 ಓವರ್‌ ಬೌಲಿಂಗ್‌ ಮಾಡಿ 27 ರನ್‌ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಆದರೆ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಆಸಿಫ್ ಅಲಿ ಬ್ಯಾಟಿಂದ ಚಿಮ್ಮಿದ ಸುಲಭ ಕ್ಯಾಚ್‌ ಕೈಚೆಲ್ಲಿದ್ದು, ಟೀಂ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ತಮಗೆ ಸಿಕ್ಕ ಜೀವದಾನವನ್ನು ಭರ್ಜರಿಯಾಗಿಯೇ ಬಳಸಿಕೊಂಡ ಆಸಿಫ್‌ ಅಲಿ ಪಾಕಿಸ್ತಾನ ತಂಡವು ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು.

ಆಸಿಫ್ ಅಲಿ ಇದಾದ ಬಳಿಕ ಕೇವಲ 8 ಎಸೆತಗಳಲ್ಲಿ ಚುರುಕಿನ 16 ರನ್ ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾದರು. ಹೀಗಾಗಿ ಹಲವು ಕ್ರಿಕೆಟ್‌ ಅಭಿಮಾನಿಗಳು ಟೀಂ ಇಂಡಿಯಾ ಸೋಲಿಗೆ ಆರ್ಶದೀಪ್ ಸಿಂಗ್ ಅವರೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ. ಹೀಗಿದ್ದೂ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಅಭಿನವ್ ಮುಕುಂದ್ ಸೇರಿದಂತೆ ಹಲವು ಕ್ರಿಕೆಟಿಗರು ಆರ್ಶದೀಪ್ ಬೆನ್ನಿಗೆ ನಿಂತಿದ್ದಾರೆ.

ಇತ್ತ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕೂಡಾ ಟ್ವೀಟ್‌ ಮೂಲಕ ಆರ್ಶದೀಪ್ ಸಿಂಗ್‌ಗೆ ಬೆಂಬಲ ನೀಡಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಅಭಿಮಾನಿಗಳಲ್ಲಿ ನಾನೊಂದು ಮನವಿ ಮಾಡುತ್ತಿದ್ದೇನೆ. ನಾವೆಲ್ಲರೂ ಮನುಷ್ಯರೆ, ಕ್ರೀಡೆಯಲ್ಲಿ ಈ ರೀತಿ ಪ್ರಮಾದಗಳು ಆಗುತ್ತವೆ. ಇದನ್ನೇ ದೊಡ್ಡ ತಪ್ಪು ಎಂದು ಯಾರೊಬ್ಬರನ್ನಯ ಅವಮಾನಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!