ಆಫ್ರಿಕಾ ವಿರುದ್ಧ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 4 ರನ್​ಗಳ ರಣರೋಚಕ ಜಯ ಸಾಧಿಸಿದೆ. ಈ ಮೂಲಕ ಸರಣಿಯವನ್ನು ಕೈವಶ ಮಾಡಿಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಾಯಕಿ ಹರ್ಮನ್​ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ ಶತಕದ ನೆರವಿನಿಂದ ನಿಗದಿತ 50 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು ದಾಖಲೆಯ 325 ರನ್ ಕಲೆಹಾಕಿತು.

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 321 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕಿ ಲಾರಾ ವೊಲ್ವಾರ್ಡ್ಟ್ ಅಜೇಯ 135 ರನ್ ಹಾಗೂ ಮರಿಜಾನ್ನೆ ಕಪ್ 114 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಗೆಲುವಿಗೆ 326 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 14 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ತಾಜ್ಮೀನ್ ಬ್ರಿಟ್ಸ್ 11 ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಲಷ್ಟೇ ಶಕ್ತರಾದರು. ಅನ್ನೆಕೆ ಬಾಷ್ 23 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಲೂಸ್ 12 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಇದಾದ ಬಳಿಕ ಕ್ಯಾಪ್ ಮತ್ತು ಲಾರಾ ನಡುವೆ 170 ಎಸೆತಗಳಲ್ಲಿ 184 ರನ್‌ಗಳ ಜೊತೆಯಾಟವಿತ್ತು. ಮರಿಜ್ನೆ ಕ್ಯಾಪ್ 94 ಎಸೆತಗಳಲ್ಲಿ 114 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದ್ದವು. ಕೊನೆಯಲ್ಲಿ ನಡಿನ್ ಡಿ ಕ್ಲರ್ಕ್ 22 ಎಸೆತಗಳಲ್ಲಿ 28 ರನ್ ಗಳಿಸಿದರು. ಆರಂಭದಿಂದಲೂ ಗೆಲುವಿಗಾಗಿ ಹೋರಾಟ ನೀಡಿದ ನಾಯಕಿ ಲಾರಾ ವೊಲ್ವಾರ್ಡ್ 135 ಎಸೆತಗಳಲ್ಲಿ 135 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದ್ದವು. ಕೊನೆಯ ಓವರ್‌ನಲ್ಲಿ ಆಫ್ರಿಕಾ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಆದರೆ ತಂಡ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯ ಓವರ್‌ನಲ್ಲಿ ಆಫ್ರಿಕಾ ಗೆಲುವಿಗೆ ಕೇವಲ 11 ರನ್‌ ಮಾತ್ರ ಬೇಕಾಗಿತ್ತು. ಭಾರತದ ಪರ ಪೂಜಾ ವಸ್ತ್ರಾಕರ್ ಬೌಲಿಂಗ್ ಮಾಡುವ ಜವಬ್ದಾರಿ ಹೊತ್ತಿದ್ದರು. ಪೂಜಾ ಅವರ ಎರಡನೇ ಎಸೆತದಲ್ಲಿ ಡಿ ಕ್ಲರ್ಕ್ ಬೌಂಡರಿ ಬಾರಿಸಿದರು . ವಸ್ತ್ರಾಕರ್ ಮೂರನೇ ಎಸೆತದಲ್ಲಿ ಡಿ ಕ್ಲರ್ಕ್ ಅವರನ್ನು ಔಟ್ ಮಾಡಿದರೆ, ಮುಂದಿನ ಎಸೆತದಲ್ಲಿ ಶಾಂಗಾಸೆ ವಿಕೆಟ್ ಪಡೆದರು. ವಸ್ತ್ರಾಕರ್ ಕೊನೆಯ ಎರಡು ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿದ್ದರಿಂದ ಟೀಂ ಇಂಡಿಯಾ ಪಂದ್ಯ ಹಾಗೂ ಸರಣಿಯನ್ನು ರೋಚಕವಾಗಿ ಗೆದ್ದುಕೊಂಡಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆಮೆಗತಿಯ ಆರಂಭ ಪಡೆದುಕೊಂಡಿತು. ಹೀಗಾಗಿ ತಂಡ ಮೊದಲ 10 ಓವರ್‌ಗಳಲ್ಲಿ 28 ರನ್ ಗಳಿಸಲಷ್ಟೇ ಶಕ್ತವಾಯಿತು. 17 ಓವರ್‌ಗಳಲ್ಲಿ ಟೀಂ ಇಂಡಿಯಾದ 50 ರನ್‌ಗಳು ಪೂರ್ಣಗೊಂಡವು. ಆದರೆ ಇದಾದ ಬಳಿಕ ಮಂಧಾನ ಮತ್ತು ಹೇಮಲತಾ ವೇಗದ ಬ್ಯಾಟಿಂಗ್ ನಡೆಸಿ ಕೇವಲ 57 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಮಂಧಾನ 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹೇಮಲತಾ ಅವರ ವಿಕೆಟ್ ಪತನದ ನಂತರ, ಮಂಧಾನ ಜೊತೆಗೂಡಿದ ನಾಯಕಿ ಹರ್ಮನ್‌ಪ್ರೀತ್ ಸ್ಫೋಟಕ ಆಟಕ್ಕೆ ಮುಂದಾದರು. ಇವರಿಬ್ಬರೂ ಕೇವಲ 90 ಎಸೆತಗಳಲ್ಲಿ ಶತಕದ ಜೊತೆಯಾಟ ನೀಡುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಹಿಮ್ಮೆಟ್ಟಿಸಿದರು. ಹರ್ಮನ್‌ಪ್ರೀತ್ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಮಂಧಾನ 103 ಎಸೆತಗಳಲ್ಲಿ ದಾಖಲೆಯ ಶತಕ ಗಳಿಸುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ಸ್ಮೃತಿ 120 ಎಸೆತಗಳಲ್ಲಿ 18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 136 ರನ್​ಗಳ ಇನ್ನಿಂಗ್ಸ್ ಆಡಿದರೆ, ಹರ್ಮನ್​ಪ್ರೀತ್ ಕೌರ್ ತಮ್ಮ ಇನ್ನಿಂಗ್ಸ್​ನಲ್ಲಿ 88 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 103 ರನ್ ಬಾರಿಸಿದರು. ಅಲ್ಲದೆ ಈ ಇಬ್ಬರೂ 136 ಎಸೆತಗಳಲ್ಲಿ 171 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ತಂಡ 300 ರ ಗಡಿ ದಾಟುವಂತೆ ಮಾಡಿದರು. ಕೊನೆಯಲ್ಲಿ ರಿಚಾ ಘೋಷ್ 13 ಎಸೆತಗಳಲ್ಲಿ 25 ರನ್ ಗಳಿಸಿದರು. ಈ ಆಟಗಾರ್ತಿಯರಿಂದಲೇ ಭಾರತ ಮಹಿಳಾ ತಂಡ 325 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!