ಜಮ್ಮು ಕಾಶ್ಮೀರಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಯೋಗ ದಿನದಲ್ಲಿ ಭಾಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಜೂ.20 ಹಾಗೂ 21ರಂದು ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ ಜೂ.21ರಂದು ಮೋದಿ ಶ್ರೀನಗರದ ಶೇರ್‌-ಎ-ಕಾಶ್ಮೀರ್ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.

‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ಯೋಗ ದಿನವನ್ನು ಆಚರಿಸಲಾಗತ್ತಿದ್ದು, ಸ್ವಯಂನ ಆಂತರ್ಯ ಮತ್ತು ಬಾಹ್ಯ ಪ್ರಪಂಚದ ನಡುವಿನ ಸಂಬಂಧವನ್ನು ಉತ್ತೇಜಿಸುವುದು ಇದರ ಉದ್ದೇಶ ಎಂದು ಕೇಂದ್ರ ಆಯುಷ್‌ ಖಾತೆ ರಾಜ್ಯಸಚಿವ ಪ್ರತಾಪ್ ರಾವ್ ಜಾಧವ್ ಮಂಗಳವಾರ ಹೇಳಿದ್ದಾರೆ.

ಬಳಿಕ ಪ್ರಧಾನಿ ಮೋದಿ ಅವರು, ಜಮ್ಮು ಕಾಶ್ಮೀರದಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ಮಾಡಲಿದ್ದಾರೆ. ಕೃಷಿ ಮತ್ತು ಸಂಬಂಧಿತ ವಲಯಗಳ ಯೋಜನೆಯಲ್ಲಿ ಸ್ಪರ್ಧಾತ್ಮಕತೆ ಸುಧಾರಣೆಗೂ ಅವರು ಚಾಲನೆ ನೀಡಲಿದ್ದಾರೆ.

ಜೂನ್ 21 ರಂದು, ಬೆಳಿಗ್ಗೆ 6.30 ರ ಸುಮಾರಿಗೆ, ಶ್ರೀನಗರದ SKICC ನಲ್ಲಿ 10 ನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು ನಂತರ CYP ಯೋಗ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಯುವಕರ ಸಬಲೀಕರಣ, ಜಮ್ಮು ಮತ್ತು ಕಾಶ್ಮೀರವನ್ನು ಪರಿವರ್ತಿಸುವುದು ಕಾರ್ಯಕ್ರಮವು ಯುವಕರಿಗೆ ಸ್ಫೂರ್ತಿ ನೀಡುವಂಥದ್ದು. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಯವರು ಸ್ಟಾಲ್‌ಗಳಿಗೆ ಭೇಟಿ ನೀಡಲಿದ್ದು ಯುವ ಸಾಧಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಪ್ರಧಾನಮಂತ್ರಿಯವರು ರೂ. 1,500 ಕೋಟಿ ವೆಚ್ಚದ 84 ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಿದ್ದಾರೆ. ರಸ್ತೆ ಮೂಲಸೌಕರ್ಯ, ನೀರು ಸರಬರಾಜು ಯೋಜನೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಮೂಲಸೌಕರ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಹೆಚ್ಚುವರಿಯಾಗಿ, ಚೆನಾನಿ-ಪಟ್ನಿಟಾಪ್-ನಶ್ರಿ ವಿಭಾಗದ ಸುಧಾರಣೆ, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ ಮತ್ತು ಆರು ಸರ್ಕಾರಿ ಪದವಿ ಕಾಲೇಜುಗಳು ನಿರ್ಮಾಣದಂತಹ ಯೋಜನೆಗಳಿಗೆ ಪ್ರಧಾನಮಂತ್ರಿ ಅಡಿಪಾಯ ಹಾಕಲಿದ್ದಾರೆ.

ಪ್ರಧಾನಮಂತ್ರಿ ಅವರು 1,800 ಕೋಟಿ ರೂ.ವೆಚ್ಚದಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸ್ಪರ್ಧಾತ್ಮಕತೆ ಸುಧಾರಣೆ (ಜೆಕೆಸಿಐಪಿ) ಯೋಜನೆಗೆ ಚಾಲನೆ ನೀಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಾದ್ಯಂತ 90 ಬ್ಲಾಕ್‌ಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಇದು 15 ಲಕ್ಷ ಫಲಾನುಭವಿಗಳನ್ನು ಒಳಗೊಂಡಿರುವ 300,000 ಕುಟುಂಬಗಳ ಯೋಜನೆಯ ವ್ಯಾಪ್ತಿಯನ್ನು ಹೊಂದಿರುತ್ತದೆ. ಪ್ರಧಾನಮಂತ್ರಿ ಅವರು ಸರ್ಕಾರಿ ಸೇವೆಯಲ್ಲಿ ನೇಮಕಗೊಂಡ 2000 ಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಯುವಕರನ್ನು ಸಶಕ್ತಗೊಳಿಸುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಸೌಕರ್ಯವನ್ನು ಸುಧಾರಿಸುತ್ತದೆ.

ಯೋಗ ದಿನಾಚರಣೆಯಲ್ಲಿ 9 ಸಾವಿರ ಮಂದಿ ಭಾಗಿ
ಸತತ ಮೂರನೇ ಬಾರಿಗೆ ಕೇಂದ್ರ ಸಚಿವರಾದ ನಂತರ ಜಮ್ಮು ರಾಜಧಾನಿ ಶ್ರೀನಗರಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಜಿತೇಂದ್ರ ಸಿಂಗ್, ಜೂನ್ 21ರಂದು ಶ್ರೀನಗರದಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲಿದ್ದಾರೆ. ಇವರ ಜತೆ ಸುಮಾರು 9,000 ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ ಮೂಲಗಳು ತಿಳಿಸಿವೆ.

ತಮ್ಮ ಎರಡು ದಿನಗಳ ಭೇಟಿಯಲ್ಲಿ ಪ್ರಧಾನ ಮಂತ್ರಿಗಳು ಸರ್ಕಾರಿ ಸೇವೆಗೆ ನೇಮಕಗೊಂಡ 2000 ಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಕಾಶ್ಮೀರ ಪ್ರವಾಸ
ಲೋಕಸಭಾ ಚುನಾವಣೆಯ ಬಳಿಕ ಮೋದಿ ಅವರ ಮೊದಲ ಕಾಶ್ಮೀರ ಪ್ರವಾಸವಾಗಿದ್ದು, ವ್ಯಾಪಕ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ಡ್ರೋನ್ ಮತ್ತು ಕ್ವಾಡ್‌ಕಾಪ್ಟರ್‌ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪೊಲೀಸರು ಆದೇಶ ಹೊರಡಿಸಿದ್ದಾರೆ. ಡ್ರೋನ್ ನಿಯಮಗಳು 2021ರ ನಿಬಂಧನೆಗಳ ಪ್ರಕಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲರೂ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!