ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್ಸ್ ತಲುಪಲು ವಿಫಲವಾಗಿತ್ತು. ಈ ಬೆನ್ನಲ್ಲೇ ಚೇತನ್ ಶರ್ಮಾ ನೇತೃತ್ವದ ನಾಲ್ವರು ಸದಸ್ಯರ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿದೆ.
ಮಹತ್ವದ ಸಭೆಯಲ್ಲಿ ಆಯ್ಕೆ ಸಮಿತಿಯ ಸಂಪೂರ್ಣ ತಂಡವನ್ನು ವಜಾಗೊಳಿಸಿದ್ದು, ನೂತನ ಆಯ್ಕೆ ಸಮಿತಿ ತಂಡ ರಚಿಸಲು ಅರ್ಜಿ ಆಹ್ವಾನಿಸಿದೆ. ಚೇತನ್, ಹರ್ವೀಂದರ್ ಸಿಂಗ್, ಸುನೀಲ್ ಜೋಶಿ, ದೇಬಾಶಿಶ್ ಮೊಹಾಂತಿ ಅವರನ್ನು ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯಿಂದ ವಜಾಗೊಳಿಸಲಾಗಿದೆ.
ವಿಶ್ವಕಪ್ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಟೂರ್ನಿಯಿಂದ ಹೊರಬಿದ್ದ ತಂಡದ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಆಟಗಾರರ ಬದಲು ಹೊಸ ಆಟಗಾರರಿಗೆ ಅವಕಾಶ ನೀಡಿ ಎಂಬ ಕೂಗು ಕೇಳಿತ್ತು.
ಅಸಮರ್ಪಕ ಆಯ್ಕೆ ಕೂಡ ಸೋಲಿಗೆ ಒಂದು ಕಾರಣ ಎಂದು ಕ್ರೀಡಾಭಿಮಾನಿಗಳು ಹೇಳಿದ್ದರು. ಇದೀಗ ಆಯ್ಕೆ ಸಮಿತಿಯನ್ನೇ ವಜಾಗೊಳಿಸಿದ್ದು, ನೂತನ ಆಯ್ಕೆ ಸಮಿತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆ ಸಮಿತಿಗೆ ಸೇರುವವರು ಕನಿಷ್ಠ ಏಳು ಟೆಸ್ಟ್ ಪಂದ್ಯ ಅಥವಾ 30 ಪ್ರಥಮ ದರ್ಜೆ ಕ್ರಿಕೆಟ್ ಅಥವಾ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯವನ್ನು ಆಡಿರಬೇಕು ಎಂದು ಬಿಸಿಸಿಐ ಹೇಳಿದೆ.