ಭಾರೀ ನಷ್ಟದಲ್ಲಿ ಟೆಕ್‌ ದೈತ್ಯ ಸ್ಯಾಮಸಂಗ್‌- 8ವರ್ಷಗಳಲ್ಲೇ ಅತ್ಯಂತ ಕನಿಷ್ಟ ತ್ರೈಮಾಸಿಕ ಆದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಆರ್ಥಿಕತೆಯ ಮಂದಗತಿಯಿಂದಾಗಿ ಟೆಕ್‌ ದೈತ್ಯ ಸ್ಯಾಮ್‌ ಸಂಗ್‌ ಭಾರೀ ನಷ್ಟದಲ್ಲಿ ಸಿಲುಕಿದೆ. ಮೆಮೊರಿ ಚಿಪ್ ಬೆಲೆಗಳು ದುರ್ಬಲವಾಗಿದ್ದು ಎಲೆಕ್ಟ್ರಾನಿಕ್ ಸರಕುಗಳ ಬೇಡಿಕೆ ತೀವ್ರವಾಗಿ ಕುಸಿದಿದೆ. ಹೀಗಾಗಿ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಕಂಪನಿಯ ತ್ರೈಮಾಸಿಕ ಲಾಭವು ಎಂಟುವರ್ಷಗಳ ಕನಿಷ್ಟ ಪ್ರಮಾಣಕ್ಕೆ ಕುಸಿದಿದೆ.

ವಿಶ್ವದ ಅತಿದೊಡ್ಡ ಮೆಮೊರಿ ಚಿಪ್, ಟೆಲಿವಿಷನ್ ಮತ್ತು ಸ್ಮಾರ್ಟ್‌ಫೋನ್ ತಯಾರಕನಾದ ದಕ್ಷಿಣ ಕೊರಿಯಾದ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆ ಸ್ಯಾಮ್‌ಸಂಗ್ ತನ್ನ ಅಕ್ಟೋಬರ್-ಡಿಸೆಂಬರ್ ಕಾರ್ಯಾಚರಣೆಯ ಲಾಭವು 69 ಪ್ರತಿಶತದಷ್ಟು ಕುಸಿದು 4.3 ಟ್ರಿಲಿಯನ್‌‌ ವೊನ್‌ (ದ.ಕೊರಿಯಾ ಕರೆನ್ಸಿ) ಗೆ ತಲುಪಿದೆ ಎಂದಿದೆ. ಒಂದು ವರ್ಷದ ಹಿಂದೆ ಈ ಲಾಭವು 13.87 ಟ್ರಿಲಿಯನ್‌ ವೊನ್‌ ಗಳಷ್ಟಿತ್ತು.

ಜಾಗತಿಕ ಆರ್ಥಿಕ ಕುಸಿತವು ಸುಧಾರಣೆಯ ಯಾವುದೇ ಲಕ್ಷಣಗಳನ್ನು ಹೊಂದಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಮತ್ತೂ ಕುಸಿತವುಂಟಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ದಾಖಲಾಗಿರುವ ಲಾಭದ ಮಟ್ಟವು 2014 ರ ನಂತರದ ಅತ್ಯಂತ ಕನಿಷ್ಟ ಲಾಭ ಎನ್ನಲಾಗಿದೆ. ಕಂಪನಿಯು ತನ್ನ ಎಲ್ಲಾ ಪ್ರಮುಖ ವ್ಯಾಪಾರ ವಿಭಾಗಗಳಲ್ಲಿ ಲಾಭವನ್ನು ಗಳಿಸುವಲ್ಲಿ ಹೆಣಗಾಡುತ್ತಿದೆ.

ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಬಡ್ಡಿದರಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರದ ಒತ್ತಡವು ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ ಸರಕುಗಳಿಗೆ ಜಾಗತಿಕ ಬೇಡಿಕೆಯನ್ನು ತೀವ್ರವಾಗಿ ತಗ್ಗಿಸಿದೆ, ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಕುಸಿದಿದೆ.

ಜಾಗತಿಕ ಆರ್ಥಿಕ ಕುಸಿತದ ಭಯದ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್ ಮಾತ್ರವಲ್ಲದೆ ಪ್ರಪಂಚದಾದ್ಯಂತದ ತಂತ್ರಜ್ಞಾನ ಕಂಪನಿಗಳ ಪರಿಸ್ಥಿತಿ ಕಠಿಣವಾಗಿದೆ. ನಡೆಯುತ್ತಿರುವ ಬೇಡಿಕೆಯ ಕುಸಿತದಿಂದ ಕೆಲವು ಪ್ರಮುಖ ತಂತ್ರಜ್ಞಾನ ಕಂಪನಿಗಳು ಈಗಾಗಲೇ ವೆಚ್ಚವನ್ನು ಕಡಿತಗೊಳಿಸಲು ಸಾಮೂಹಿಕ ವಜಾ ಸೇರಿದಂತೆ ತೀವ್ರ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಜಾಗತಿಕ ಆರ್ಥಿಕ ಪರಿಸ್ಥಿತಿಯು ಸದ್ಯಕ್ಕೆ ಸುಧಾರಣೆಗೊಳ್ಳುವ ಲಕ್ಷಣಗಳನ್ನು ಹೊಂದಿಲ್ಲ ಹಾಗಾಗಿ ಜಾಗತಿಕ ತಂತ್ರಜ್ಞಾನ ಉದ್ಯಮವು ದೀರ್ಘಾವಧಿಯ ಸವಾಲನ್ನು ಎದುರಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದು ಇದು ಮುಂದಿನ ದಿನಗಳಲ್ಲಿ ಹೆಚ್ಚಿನ ವಜಾಗೊಳಿಸುವಿಕೆಗೂ ಕಾರಣವಾಗಬಹುದು ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!