ಹೊಸದಿಗಂತ ವರದಿ ಹಾವೇರಿ:
ಹಣದಿಂದ ಅಧಿಕಾರ ಕೊಂಡುಕೊಂಡ ವ್ಯಕ್ತಿಗಳು ಇಂದು ವಿಧಾನ ಮಂಡಳ ಪ್ರವೇಶ ಮಾಡುತ್ತಿರುವುದರಿಂದಾಗಿ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಕುಸಿತವಾಗುತ್ತಿದೆ. ಇದು ಬದಲಾಗಬೇಕಾದರೆ ಸಮಾಜದಲ್ಲಿ ದೊಡ್ಡ ಕಾಂತ್ರಿಯಾಗಬೇಕು. ಇದಕ್ಕಾಗಿ ಜನಮಾನಸದಲ್ಲಿ ಸಾಮೂಹಿಕ ಜಾಗೃತಿ ಮೂಡಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರು ಅಭಿಪ್ರಾಯಪಟ್ಟರು.
ಸಮ್ಮೇಳನಾಧ್ಯಕ್ಷರು ಮಾತು ಮಂಥನ ಕಾರ್ಯಕ್ರಮದಲ್ಲಿ ಪ್ರಸ್ತುತ ರಾಜಕೀಯ ಕ್ಷೇತ್ರ ಸಾಗುತ್ತಿರುವ ದಾರಿಯ ಕುರಿತಾಗಿ ತಮ್ಮ ಅನುಭವ, ಅಭಿಪ್ರಾಯ ಬಿಚ್ಚಿಟ್ಟರು. ಆರು ವರ್ಷ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ. ಈಗ ಸಂಸದೀಯ ವ್ಯವಸ್ಥೆ ಕುಸಿತಗೊಳ್ಳುತ್ತಿದ್ದು, ವಿಧಾನಮಂಡಳಗಳಲ್ಲಿ ಗುಣಮಟ್ಟದ ಚರ್ಚೆಗಳೇ ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಿಗೆ ನೀವೇನು ಸಲಹೆ ನೀಡುತ್ತೀರಿ ಎಂಬ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರ ಪ್ರಶ್ನೆ ದೊಡ್ಡರಂಗೇಗೌಡರನ್ನು ತಮ್ಮ ರಾಜಕೀಯಅನುಭವದ ಸುಳಿಗಳನ್ನು ಬಿಚ್ಚಿಡುವಂತೆ ಮಾಡಿತು.
ಪಂಜೆ ಎತ್ತೋರ ನಡುವೆ :
ವಿಧಾನ ಮಂಡಳಗಳಲ್ಲಿ ಬಳಕೆ ಆಗೋ ಭಾಷೆ ನೋಡಿ, ಭಯವಾಗುತ್ತದೆ. ಪ್ರಜಾಪ್ರಭುತ್ವದ ಪವಿತ್ರ ತಾಣದಲ್ಲಿ ಜನರನ್ನು ಪ್ರತಿನಿಧಿಸುವವರು ಪಂಜೆ ಎತ್ತಿ, ತೊಡೆ ತಟ್ಟಿ ಅಬ್ಬರಿಸುತ್ತಾರೆಂದರೆ ಇದಕ್ಕೆ ಏನಂತ ಉತ್ತರಿಸೋಣ. ಮೌನ- ಖೇದವೇ ನಮ್ಮ ಉತ್ತರ ಅನ್ನಬಹುದು ಎಂದರು.
ಆರು ವರ್ಷ ನಾನೂ ಪರಿಷತ್‍ನ್ನು ಪ್ರತಿನಿಧಿಸಿದ್ದೆ. ಕೆಲವು ವಿಷಯವನ್ನು ಬಹಿರಂಗವಾಗಿ ಮಾತನಾಡುವಂತಿಲ್ಲ. ದುಡ್ಡಿದ್ದವರು ಗೆದ್ದು ಬರುತ್ತಿದ್ದರೆ, ದುಡ್ಡು ಎಲ್ಲಿಂದ ಬಂತು ಅಂತ ಪ್ರಶ್ನೆ ಮಾಡೋರ್ಯಾರು ಎಂದು ಪ್ರಶ್ನೆ ಸಭಿಕರ ಮುಂದಿಟ್ಟರು.
ಅಸಹಾಯಕರು :
ಸಾಹಿತ್ಯ , ಸಂಸ್ಕೃತಿ , ಪತ್ರಿಕೋದ್ಯಮ ಕ್ಷೇತ್ರದಿಂದ ನಾಮಕರಣ ಮಾಡುವಾಗ ಇದಕ್ಕೆ ಹೆಸರು ಕಳಿಸುವ ರಾಜಕಾರಣಿಗಳು ಮತ್ತು ಅದನ್ನು ಕಣ್ಮುಚ್ಚಿ ಅನುಮೋದನೆ ಮಾಡುವ ರಾಜ್ಯಪಾಲರಿಗೆ ಏನಾಗಿದೆಯೋ ಅರ್ಥ ಆಗುತ್ತಿಲ್ಲ. ನನ್ನ ಅವಧಿಯಲ್ಲಿ ಓರ್ವ ವ್ಯಕ್ತಿಯನ್ನು ರಾಜಕಾರಣಕ್ಕೆ ತರಲು ಅವರನ್ನು ಸಾಹಿತ್ಯ ಕ್ಷೇತ್ರದಿಂದ ನಾಮಕರಣ ಮಾಡಲು ಹೊರಟಿದ್ದರು. ಇದು ನನ್ನನ್ನು ಬಹುವಾಗಿ ಕಾಡಿತು. ಇದಕ್ಕಿಂತ ದೊಡ್ಡ ದುರಂತ ಇನ್ನೇನಿದೆ ಎಂದು ದೊಡ್ಡರಂಗೇಗೌಡರು ಈ ಕುರಿತಾಗಿ ಅಂಜನ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸುತ್ತ ಅಸಹಾಯಕತೆ ವ್ಯಕ್ತಪಡಿಸಿದ್ದು ಕಂಡು ಬಂತು.
ನಿಂತ ನೀರಾಗದಿರಲಿ :
ಸಾಹಿತ್ಯ ಇಂದು ಅಂತರ್ಜಾಲದಲ್ಲಿ ಹೆಚ್ಚು ವಿಜ್ರಂಭಿಸುತ್ತಿರುವುದರಿಂದ ಪುಸ್ತಕ ಸಂಸ್ಕೃತಿಗೆ ಹೊಡೆತವಾದೀತೇ ಎಂಬ ಡಾ. ಶೀಲಾದೇವಿ ಮಳಿಮಠ ಅವರ ಪ್ರಶ್ನೆಗೆ ಉತ್ತರಿಸಿದ ಗೌಡರು, ಬರಹಗಾರ ನಿಂತ ನೀರಾಗಬಾರದು. ಹೊರಗಿನ ವೈಜ್ಞಾನಿಕ ಬೆಳವಣಿಗೆ ಗಮನಿಸಿ ಈ ಮೂಲಕ ತನ್ನ ಬರಹವನ್ನು ಇನ್ನಷ್ಟು ವಿಸ್ತಾರಗೊಳಿಸುವ ಬದ್ಧತೆ ಬೇಕುಎಂದರು. ಅಮೇರಿಕಾದಂತಹ ದೇಶದಲ್ಲಿ ತಂತ್ರಜ್ಞಾನವನ್ನು ಬಳಸಿ ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿದಿರುವುದನ್ನು ಉದಾಹರಿಸಿದರು.
ಮಾತು ಮಂಥನದಲ್ಲಿ ಬಾಪು ಪದ್ಮನಾಭ, ಡಾ. ಶಾರದಾ ಮುಳ್ಳೂರು, ಬುಕ್ಕಾಪಟ್ನ ವಾಸು , ಸಂಕಮ್ಮ, ಸಂಕಣ್ಣನವರ್ ಪಾಲ್ಗೊಂಡಿದ್ದರು.