9ನೇ ತರಗತಿ ಬಾಲಕಿಯ ಕಿಡ್ನ್ಯಾಪ್:‌ ಸತತ 3ತಿಂಗಳ ಕಾಲ ಅತ್ಯಾಚಾರವೆಸಗಿದ ಕಿರಾತಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂಭತ್ತನೇ ತರಗತಿ ಬಾಲಕಿಯನ್ನು ಮೂವರು ಕಿರಾತಕರು ಕಿಡ್ನ್ಯಾಪ್‌ ಮಾಡಿ, ಸತತ ಮೂರು ತಿಂಗಳಿಂದ ಅತ್ಯಾಚಾರ ನಡೆಸಿರುವ ದಾರುಣ ಘಟನೆ ಜಾರ್ಖಾಂಡ್‌ನಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿಗಳು ಏಪ್ರಿಲ್ 20 ರಂದು ಜಾರ್ಖಂಡ್‌ನ ಬೊಕಾರೊ ಪ್ರದೇಶದಲ್ಲಿ ಬಾಲಕಿಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

ಬಾಲಕಿ ಸ್ಥಳೀಯ ಮಾರುಕಟ್ಟೆಯಿಂದ ಮನೆಗೆ ಹೋಗುತ್ತಿದ್ದಾಗ ಮೂವರು ದುರುಳರು ಆಕೆಯನ್ನು ಆಟೋದಲ್ಲಿ ಅಪಹರಿಸಿ, ರಹಸ್ಯ ಸ್ಥಳದಲ್ಲಿ ಬಂಧಿಸಿದ್ದಾರೆ. ಸುಮಾರು ಮೂರು ತಿಂಗಳ ಕಾಲ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದರೆ ಮನಸೋ ಇಚ್ಛೆ ಥಳಿಸಿ, ಕೋಣೆಗೆ ಬೀಗ ಹಾಕುತ್ತಿದ್ದರು.

ಇದೇ 19ರಂದು ಆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಬಾಲಕಿಯನ್ನು ಗಮನಿಸಿದ್ದಾರೆ. ಕಲ್ಲಿನಿಂದ ಬೀಗ ಒಡೆದು ಬಾಲಕಿಯನ್ನು ರಕ್ಷಿಸಿ ಅವರ ಮನೆಗೆ ಸೇರಿಸಿದ್ದಾಳೆ. ಮನೆಗೆ ಬಂದ ಬಳಿಕ ಬಾಲಕಿ ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಮನೋಜ್ ಕುಮಾರ್, ವಿಷ್ಣು ಕುಮಾರ್ ಮತ್ತು ಮಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಈಗ ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಾಲಕಿ ಕಾಣೆಯಾದ ದಿನವೇ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!