ಪ್ರಧಾನಿ ಮೋದಿ ಸಲಹೆಯನ್ನು ಪಾಲಿಸಿದ ತೇಜಸ್ವಿ ಯಾದವ್​: ಆರೋಗ್ಯಕ್ಕಾಗಿ ವರ್ಕೌಟ್​​ ಆರಂಭಿಸಿದ ಆರ್ ಜೆಡಿ ನಾಯಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ತೆರಳಿದ್ದ ವೇಳೆ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರಿಗೆ ಫಿಟ್‌ನೆಸ್ ನೋಡುಕೊಳ್ಳುವಂತೆ ಸಲಹೆ ನೀಡಿದ್ದು, ಇದನ್ನು ಗಂಭೀರವಾಗಿ ಸ್ವೀಕರಿಸಿದ ಯಾದವ್, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ವರ್ಕೌಟ್​​ ಆರಂಭಿಸಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಬಿಹಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ತಮ್ಮ ಫಿಟ್‌ನೆಸ್ ವರ್ಕೌಟ್ ವಿಡಿಯೋವನ್ನು ಮತ್ತೆ ಎರಡನೇ ಬಾರಿಗೆ ಹಂಚಿಕೊಂಡಿದ್ದಾರೆ.
ತೂಕ ಇಳಿಸಿಕೊಳ್ಳಲು ಪ್ರಧಾನಿ ಮೋದಿಯವರು ಸಲಹೆ ನೀಡಿದ ನಂತರ ತೇಜಸ್ವಿ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದ್ದಾರೆ .

ತೇಜಸ್ವಿ ಅವರು ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಓಡಿಸುತ್ತಿದ್ದ ಹಳೆಯ ಜೀಪ್​ನ್ನು ಎಳೆಯುವ ಮತ್ತು ತಳ್ಳುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮದುವೆಯ ನಂತರ ತೇಜಸ್ವಿ ಸಾಕಷ್ಟು ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮದುವೆಗೆ ಮೊದಲು ಅವರು 75 ಕೆಜಿ ಇದ್ದು, ನಂತರ ಅವರು 85 ಕೆಜಿ ತೂಕವನ್ನು ಹೊಂದಿದ್ದಾರೆ. ಸುಮಾರು 10 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.
ಪ್ರಧಾನಿ ಸಲಹೆಯ ನಂತರ ಅವರು ತಮ್ಮ ಆಹಾರಕ್ರಮವನ್ನು ನಿಯಂತ್ರಿಸಿದ್ದು, ಎಣ್ಣೆಯುಕ್ತ ಆಹಾರ ಮತ್ತು ಸಿಹಿತಿಂಡಿಗಳನ್ನು ತಪ್ಪಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಅವರು ಸಾಕಷ್ಟು ಸಲಾಡ್ ಮತ್ತು ಕಡಿಮೆ ಮಸಾಲೆಗಳೊಂದಿಗೆ ಆಹಾರವನ್ನು ಸೇವಿಸುತ್ತಿದ್ದಾರೆ. ಅವರು ಕೊಬ್ಬಿನ ಅಂಶಗಳನ್ನು ಹೊಂದಿರುವ ಎಲ್ಲಾ ಖಾದ್ಯಗಳನ್ನು ತಪ್ಪಿಸುತ್ತಿದ್ದಾರೆ ಎಂದು ತೇಜಸ್ವಿ ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಜುಲೈ 12 ರಂದು ಬಿಹಾರ ವಿಧಾನಸಭೆಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ಪಾಟ್ನಾಗೆ ಬಂದಿದ್ದರು. ಈ ವೇಳೆ ಸಭೆಯಲ್ಲಿ ಇಬ್ಬರೂ ಆರೋಗ್ಯದ ಕುರಿತು ಮಾತುಕತೆ ನಡೆಸಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ, ಪ್ರಧಾನಿ ಅವರು ತೇಜಸ್ವಿಗೆ ಸ್ವಲ್ಪ ತೂಕ ಇಳಿಸಿಕೊಳ್ಳಲು ಸಲಹೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!