ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಪೂರ್ವ ಬೇಸಿಗೆ ಅಬ್ಬರ ಜೋರಾಗಿದೆ. ಈ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಮುಂದಿನ ಒಂದು ವಾರ ಉಷ್ಣಾಂಶನ್ನು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿಗ್ರಿ ಉಷ್ಣಾಂಶ ಹೆಚ್ಚಾಗುವ ಮೂಲಕ ಜನರನ್ನ ಕಂಗಾಲಾಗಿಸಿದೆ. ಬೇಸಿಗೆಗೂ ಮುನ್ನವೇ ಪರಿಸ್ಥಿತಿ ಹೀಗಾಗಿದ್ದು, ಮುಂಬರುವ ಬೇಸಿಗೆ ದಿನಗಳನ್ನ ಎದುರಿಸೋದು ಹೇಗೆ ಎನ್ನುವ ಆತಂಕ ಶುರುವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಮುಂದಿನ ಒಂದು ವಾರ ಬಿಸಿಲಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸದ್ಯಕ್ಕಿಂತಲೂ 2-3 ಡಿಗ್ರಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ.
ಮುಂದಿನ ಒಂದು ವಾರ ಕರಾವಳಿಯಲ್ಲಿ ಗರಿಷ್ಠ ತಾಪಮಾನದ ಜೊತೆಗೆ ಕನಿಷ್ಠ ಉಷ್ಣಾಂಶವೂ ಕೂಡ ಗರಿಷ್ಠ ಉಷ್ಣಾಂಶದ ಮಟ್ಟಕ್ಕೆ ಏರಿಕೆಯಾಗಿದೆ. ಕರಾವಳಿಯಲ್ಲಿ ಕನಿಷ್ಠ ಉಷ್ಣಾಂಶ 23-25 ಡಿಗ್ರಿ ಹಾಗೂ ಗರಿಷ್ಠ ತಾಪಮಾನ 33-34 ಡಿಗ್ರಿ ವ್ಯಾಪ್ತಿಯಲ್ಲಿರುತ್ತದೆ. ಉತ್ತರ ಒಳನಾಡಿನಲ್ಲಿ 34-37 ಡಿಗ್ರಿ, ದಕ್ಷಿಣ ಒಳನಾಡಿನ ಆಗುಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ ಮತ್ತು ಮಡಿಕೇರಿಯಲ್ಲಿ 31-33 ಡಿಗ್ರಿ ಇರಲಿದೆ.