June 3, 2026
Wednesday, June 3, 2026
spot_img

ದೇವಸ್ಥಾನವೋ ಅಥವಾ ಜಿಮ್ಮೋ? ವರುಣ್ ಧವನ್ ವಸ್ತ್ರಸಂಹಿತೆ ವಿರುದ್ಧ ನೆಟ್ಟಿಗರ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸ್ಟಾರ್ ನಟ ವರುಣ್ ಧವನ್ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಚಲನಚಿತ್ರ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜೂನ್ 5ರಂದು ಈ ಸಿನಿಮಾ ಅದ್ಧೂರಿಯಾಗಿ ತೆರೆಕಾಣುತ್ತಿದ್ದು, ಚಿತ್ರದ ಯಶಸ್ಸಿಗಾಗಿ ವರುಣ್ ಧವನ್ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದರೆ, ಅವರು ದೇವಸ್ಥಾನಕ್ಕೆ ಭೇಟಿ ನೀಡಿದ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ವಿವಾದಕ್ಕೆ ಕಾರಣವಾಗಿವೆ.

ದೇವಸ್ಥಾನಕ್ಕೆ ಹೋಗುವಾಗ ವರುಣ್ ಧವನ್ ಧರಿಸಿದ್ದ ಉಡುಪಿನ ಶೈಲಿ ಈಗ ಸಾರ್ವಜನಿಕರ ಹಾಗೂ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವರುಣ್ ಧವನ್ ಅವರು ಬನಿಯಾನ್ ಮತ್ತು ಹಾಫ್ ಶಾರ್ಟ್ಸ್ ಧರಿಸಿ ದೇವಸ್ಥಾನದೊಳಗೆ ದೇವರ ದರ್ಶನ ಪಡೆಯಲು ಬಂದಿದ್ದರು. ಪವಿತ್ರ ಧಾರ್ಮಿಕ ಸ್ಥಳಕ್ಕೆ ಇಂತಹ ಉಡುಪು ಧರಿಸಿ ಬಂದಿರುವುದನ್ನು ನೋಡಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತಗೆದುಕೊಂಡಿದ್ದಾರೆ.

‘ದೇವಸ್ಥಾನ ಮತ್ತು ಜಿಮ್ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ?’
ವರುಣ್ ಧವನ್ ಅವರ ಈ ಉಡುಪನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. “ವರುಣ್ ಧವನ್ ಅವರಿಗೆ ದೇವಸ್ಥಾನ ಮತ್ತು ಜಿಮ್ ನಡುವೆ ಇರುವ ವ್ಯತ್ಯಾಸವೇ ತಿಳಿದಿಲ್ಲವೇ? ವರ್ಕೌಟ್ ಮಾಡುವ ಬಟ್ಟೆಗಳನ್ನು ಧರಿಸಿ ಇಂತಹ ಪವಿತ್ರ ಹಾಗೂ ಧಾರ್ಮಿಕ ಸ್ಥಳಕ್ಕೆ ಬರುವುದು ಎಷ್ಟು ಸರಿ?” ಎಂದು ಅನೇಕರು ನೇರವಾಗಿಯೇ ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಧಾರ್ಮಿಕ ಸ್ಥಳಗಳ ಘನತೆ ಮತ್ತು ವಸ್ತ್ರಸಂಹಿತೆಯ ಬಗ್ಗೆ ಪರ-ವಿರೋಧದ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. “ಯಾವುದಾದರೂ ಮುಸ್ಲಿಂ ನಟರು ಮಸೀದಿಗೆ ಹೋಗುವಾಗ ಇಂತಹ ಉಡುಪು ಧರಿಸಿ ಹೋಗುವುದನ್ನು ನೀವು ನೋಡಿದ್ದೀರಾ? ಕೇವಲ ಹಿಂದೂ ದೇವಸ್ಥಾನಗಳಿಗೆ ಬರುವಾಗಲೇ ಸೆಲೆಬ್ರಿಟಿಗಳಿಗೆ ಇಂತಹ ಬೇಜವಾಬ್ದಾರಿತನ ಏಕೆ?” ಎಂದು ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ. ಒಟ್ಟಾರೆಯಾಗಿ, ಧಾರ್ಮಿಕ ಆಚರಣೆಗಳ ಜಾಗಕ್ಕೆ ಬರುವಾಗ ಕನಿಷ್ಠ ಗೌರವ ಹಾಗೂ ಶಿಸ್ತು ಇರಬೇಕು ಎಂಬ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ವರುಣ್ ಧವನ್ ಈ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !