ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊನ್ನೆ ಗನ್ನವರಂ, ನಿನ್ನೆ ಬೇತಂಚರ್ಲ, ಇಂದು ಕದಿರಿ…ಆಂಧ್ರಪ್ರದೇಶದ ಕೆಲವೆಡೆ ಟಿಡಿಪಿ-ವೈಸಿಪಿ ಬಣಗಳ ಘರ್ಷಣೆಯಿಂದ ಸದಾ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ದಾಳಿ ಪ್ರತಿ ದಾಳಿಯೊಂದಿಗೆ ಏನಾಗುತ್ತದೋ ಎಂದು ಸ್ಥಳೀಯರು ಭಯಭೀತರಾಗಿದ್ದಾರೆ.
ಸತ್ಯಸಾಯಿ ಜಿಲ್ಲೆಯ ಕದಿರಿನಲ್ಲಿ ಇದೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕದಿರಿ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮೋತ್ಸವದ ಸಿದ್ಧತೆಯ ಅಂಗವಾಗಿ ದೇವಸ್ಥಾನದ ಸುತ್ತ ಮುತ್ತಲಿನ ಅಂಗಡಿಗಳನ್ನು ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ವಿಷಯ ತಿಳಿದ ಟಿಡಿಪಿಯ ಮಾಜಿ ಶಾಸಕ ಕಂದಿಕುಂಟಾ ಪ್ರಸಾದ್ ಅವರು ಕ್ಷೇತ್ರಕ್ಕೆ ಕಾಲಿಟ್ಟು, ಪುರಸಭೆ ಅಧಿಕಾರಿಗಳು ಅಂಗಡಿಗಳನ್ನು ತೆಗೆಯದಂತೆ ತಡೆದರು. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಈ ಸಂಬಂಧ ಟಿಡಿಪಿ ಮತ್ತು ವೈಸಿಪಿ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಸಿಐ ಜತೆ ಮಾಜಿ ಶಾಸಕ ಕಂದಿಕುಂಟಾ ಪ್ರಸಾದ್ ವಾಗ್ವಾದ ನಡೆಸಿದರು. ಎರಡೂ ಕಡೆಯವರು ಚೆನ್ನೈ ಹೆದ್ದಾರಿಯಲ್ಲಿ ಮೊಕ್ಕಾಂ ಹೂಡಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು.
ಟಿಡಿಪಿ ಮತ್ತು ವೈಸಿಪಿ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ, ಕಲ್ಲು ತೂರಾಟ ನಡೆದಿದೆ. ಪರಸ್ಪರ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಕೆಲವು ಟಿಡಿಪಿ ಪದಾಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘರ್ಷಣೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಲಾಠಿ ಚಾರ್ಜ್ ಮಾಡಿ ಎರಡೂ ಕಡೆ ಚದುರಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.