ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆಯೇ, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಲ್ಲಿ ಮರಣದಂಡನೆಗೆ ಗುರಿಯಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸಬೇಕೆಂದು ಮಧ್ಯಂತರ ಸರ್ಕಾರ ಮತ್ತೆ ಒತ್ತಾಯಿಸಿದೆ.
ಈ ಕುರಿತು ಬಾಂಗ್ಲಾದೇಶ ಸರ್ಕಾರ ಭಾರತಕ್ಕೆ ಮತ್ತೊಮ್ಮೆ ಅಧಿಕೃತ ಪತ್ರ ಕಳುಹಿಸಿದೆ ಎಂದು ವಿದೇಶಾಂಗ ಸಲಹೆಗಾರ ತೌಹಿದ್ ಹೊಸೇನ್ ತಿಳಿಸಿದ್ದಾರೆ.
ಆಗಸ್ಟ್ 2024ರಲ್ಲಿ ಅವಾಮಿ ಲೀಗ್ ಸರ್ಕಾರ ಉರುಳಿದ ನಂತರ, 78 ವರ್ಷದ ಹಸೀನಾ ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಅವರನ್ನು ಗಡಿಪಾರು ಮಾಡಬೇಕೆಂದು ಬಾಂಗ್ಲಾದೇಶ ನಿರಂತರ ಒತ್ತಾಯ ಮಾಡುತ್ತಿದೆ. ನವೆಂಬರ್ 17ರಂದು 2024ರ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ನಡೆದ ಹತ್ಯೆಗಳ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಹಸೀನಾ ಅವರಿಗೆ ಮರಣದಂಡನೆ ವಿಧಿಸಿತ್ತು. ಈ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಕೂಡ ಇದೇ ಶಿಕ್ಷೆಗೆ ಗುರಿಯಾಗಿದ್ದಾರೆ.
ಆದರೆ, ಹಸೀನಾ ಹಸ್ತಾಂತರ ಕುರಿತಂತೆ ಭಾರತದಿಂದ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ. ಕಳೆದ ವಾರ ಐಸಿಟಿ ತೀರ್ಪು ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಭಾರತ, “ಬಾಂಗ್ಲಾದೇಶ ನ್ಯಾಯಮಂಡಳಿಯ ತೀರ್ಪನ್ನು ಗಮನಿಸಿದ್ದೇವೆ” ಎಂದು ಮಾತ್ರ ಹೇಳಿಕೆ ನೀಡಿತ್ತು.

