July 22, 2026
Wednesday, July 22, 2026
spot_img

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: 11 ಸ್ಕೈಡೈವರ್ಸ್ ಸೇರಿ 12 ಜನ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಮಿಸೌರಿ ರಾಜ್ಯದಲ್ಲಿ ಭಾನುವಾರ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದ್ದು, ಪೈಲಟ್ ಸೇರಿದಂತೆ ಒಟ್ಟು 12 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು 11 ಸ್ಕೈಡೈವರ್‌ಗಳು ಮತ್ತು ಒಬ್ಬ ಪೈಲಟ್ ಎಂದು ಗುರುತಿಸಲಾಗಿದೆ.

ರನ್‌ವೇಯಿಂದ ಹಾರಿದ ಬೆನ್ನಲ್ಲೇ ದುರಂತ

ಸ್ಥಳೀಯ ಸ್ಕೈಡೈವಿಂಗ್ ಕಂಪನಿಯೊಂದು ಗುತ್ತಿಗೆಗೆ ಪಡೆದಿದ್ದ ‘ಪೆಸಿಫಿಕ್ ಏರೋಸ್ಪೇಸ್ ಪಿ 750’ ಮಾದರಿಯ ಈ ಖಾಸಗಿ ಲಘು ವಿಮಾನವು, ಭಾನುವಾರ ಸ್ಥಳೀಯ ಸಮಯ ಬೆಳಿಗ್ಗೆ 11:20 ರ ಸುಮಾರಿಗೆ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆಗಿತ್ತು. ಆದರೆ, ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ತೀಕ್ಷ್ಣವಾಗಿ ಎಡಕ್ಕೆ ತಿರುಗಿ, ನಿಯಂತ್ರಣ ಕಳೆದುಕೊಂಡು ಏರ್‌ಪೋರ್ಟ್‌ನಿಂದ ಕೇವಲ 200 ಗಜಗಳಷ್ಟು ದೂರದಲ್ಲೇ ನೆಲಕ್ಕೆ ಅಪ್ಪಳಿಸಿದೆ.

ಸ್ಥಳದಲ್ಲೇ 12 ಮಂದಿ ಸಾವು

ಅಪಘಾತದ ತೀವ್ರತೆಗೆ ವಿಮಾನದಲ್ಲಿದ್ದ ಎಲ್ಲಾ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಬೇಟ್ಸ್ ಕೌಂಟಿಯ ತುರ್ತು ನಿರ್ವಹಣಾ ವಕ್ತಾರರು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಇದು ವಾಣಿಜ್ಯ ವಿಮಾನವಾಗಿರಲಿಲ್ಲ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ. ಪ್ರಸ್ತುತ ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ವಾಯುಯಾನ ಸಂಸ್ಥೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !