ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯ ಮೂಲಕ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿ ಮೇಲೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂವರಿಗೆ ಗಂಭೀರವಾದ ಗಾಯವಾಗಿರುವ ಘಟನೆ ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ರಾಮಶೆಟ್ಟಿಹಟ್ಟಿ ಬಳಿಯ ರಾಷ್ಠಿಯ ಹೆದ್ದಾರಿಯ ಬೈಪಾಸ್ ಬಳಿ ಸೋಮವಾರ ನಡೆದಿದೆ. ರಾಮಶೆಟ್ಟಿಹಳ್ಳಿ ಗ್ರಾಮದ ಕಮಲಮ್ಮ (45), ಹಳೇಪಾಳ್ಯ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವೀಣಾ (13) ಮೃತರು. ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಾಲು ಮಾಡಲಾಗಿದೆ.
ಈ ನಡುವೆ ಪ್ರತಿ ನಿತ್ಯ ಅಪಘಾತ ಸಂಭವಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ತಹಶೀಲ್ದಾರ್ ಪವನಕುಮಾರ್, ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಈ ನಡುವೆ ತಿಪಟೂರು ಗ್ರಾಮಾಂತರ ಠಾಣಾ ಪೊಲೀಸರು ಖಾಸಗಿ ಬಸ್ ಚಾಲಕನನ್ನು ಬಂಧನಕ್ಕೊಳಪಡಿಸಿದ್ದು, ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.