ವರ್ಷಗಳ ತುಳವರ ಕನಸು ನನಸಾಗೋ ಸಮಯ ಬಂದಿದೆ, ತುಳು ಲಿಪಿಗೆ ಯೂನಿಕೋಡ್ ಮಾನ್ಯತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ತುಳು ಭಾಷೆ ಇದೀಗ ಯೂನಿಕೋಡ್‌ಗೆ ಸೇರ್ಪಡೆಗೊಂಡಿದ್ದು, ಈ ಮೂಲಕ ಹಲವು ವರ್ಷಗಳ ತುಳುವರ ಕನಸು ನನಸಾದಂತಾಗಿದೆ.

ಯೂನಿಕೋಡ್ ನ 16ನೇ ಆವೃತ್ತಿಯಾಗಿ ತುಳು ಲಿಪಿ ಸೇರ್ಪಡೆಯಾಗಿದ್ದು, ಒಟ್ಟು 80 ಅಕ್ಷರಗಳನ್ನು ಸೇರ್ಪಡೆಗೊಳಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು ಲಿಪಿ ಲಭ್ಯವಾಗಿರುವ ಕಾರಣ ಮುಂದಿನ ದಿನಗಳಲ್ಲಿ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್​, ಸ್ಪೀಚ್​ ಟು ಟೆಕ್ಸ್ಟ್ ​ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಇವೆಲ್ಲವನ್ನೂ ಮಾಡಲು ಸಾಧ್ಯವಾಗಲಿದೆ.

2017ರಲ್ಲಿ ಯೂನಿಕೋಡ್​ ಅಗತ್ಯದ ಹಿನ್ನೆಲೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯು ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಒಂದು ಸಮಿತಿ ರಚಿಸಿತ್ತು. ಮಾಹಿತಿ ತಂತ್ರಜ್ಞಾನ ತಜ್ಞರಾದ ಯು.ಬಿ.ಪವನಜ ತಾಂತ್ರಿಕ ಸಲಹೆ ನೀಡಿದ್ದರು. ಇದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟಗಳ ಪಟ್ಟಿಯನ್ನು ಯುನಿಕೋಡ್‌ಗೆ ಕಳುಹಿಸಲಾಗಿತ್ತು. ಇದೇ ಸಂದರ್ಭ ‘ತಿಗಳಾರಿ ಲಿಪಿ’ ಎಂದು ಪ್ರತ್ಯೇಕ ಪ್ರಸ್ತಾವನೆ ಕೂಡ ಸಲ್ಲಿಸಲಾಗಿತ್ತು.

ಬಳಿಕ ಎರಡೂ ಕಡೆ ಹಲವು ಪತ್ರ ವ್ಯವಹಾರಗಳು ನಡೆದು ಅಂತಿಮವಾಗಿ ‘ತುಳು-ತಿಗಳಾರಿ’ ಹೆಸರಿನಲ್ಲಿ ಲಿಪಿಯನ್ನು ಯೂನಿಕೋಡ್‌ಗೆ ಸೇರಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ‌ ಅವರು 2001ರಲ್ಲಿ ಯೂನಿಕೋಡ್​ ಕನ್ಸೋರ್ಶಿಯಂಗೆ ಹೋಗಿದ್ದಾಗ ಯೂನಿಕೋಡ್‌ನಲ್ಲಿ ಕನ್ನಡವನ್ನು ಸರಿಪಡಿಸಲು ಸಹಾಯ ಮಾಡಿದ್ದರು. ಆಗ ತುಳುವನ್ನು ಕೂಡ ಸೇರಿಸಬೇಕೆಂದು ಮನವಿ ಮಾಡಿದ್ದರು. ಅದರಂತೆ, ತುಳುವಿಗೆ ಒಂದು ಜಾಗ ಕಾಯ್ದಿಟ್ಟಿದ್ದರು. ತುಳು ಯೂನಿಕೋಡ್ ಲಿಪಿ ಹೇಗಿರಬೇಕು ಎಂಬ ಕಡತ ಕಳುಹಿಸಿ ಎಂದು ಅವರು ಕೇಳಿಕೊಂಡಿದ್ದರು. ತುಳು ಅಕಾಡೆಮಿ ಕಳುಹಿಸಿದ ಅಕ್ಷರಗಳ ಪಟ್ಟಿಗೂ ಈಗ ತುಳು-ತಿಗಲಾರಿ ಹೆಸರಿನಲ್ಲಿ ಯುನಿಕೋಡ್‌ನವರು ಅಂತಿಮಗೊಳಿಸಿದ ಪಟ್ಟಿಗೂ ಸಣ್ಣಪುಟ್ಟ ವ್ಯತ್ಯಾಸಗಳಿವೆ. ಆದರೆ ಬಹುತೇಕ ಅಕ್ಷರಗಳು ಬಂದಿವೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!