October 10, 2026
Saturday, October 10, 2026
spot_img

ಬೆಂಗಳೂರಿನಲ್ಲಿ ಭೀಕರ ದುರಂತ: ಶೆಡ್ ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಸಜೀವ ದಹನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪುರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಅರ್ಜುನ್ (5), ಆಶಾ (3) ಮೃತ ಮಕ್ಕಳು.

ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ ಕುಟುಂಬವೊಂದು ನಾರಾಯಣಪುರದಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದರು. ಕೆಲಸಕ್ಕಾಗಿ ಪೋಷಕರು ಮಕ್ಕಳನ್ನು ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಅತ್ತ ಅಜ್ಜಿ ಮಕ್ಕಳನ್ನು ಶೆಡ್‌ನಲ್ಲಿ ಬಿಟ್ಟು ಸ್ವಲ್ಪ ದೂರ ಹೊರಗಡೆ ಹೋಗಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದೆ.

ಅಕ್ಕಪಕ್ಕದವರು ಬೆಂಕಿ ನಂದಿಸಲು ಧಾವಿಸುವಷ್ಟರಲ್ಲೇ ಶೆಡ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಮಕ್ಕಳು ಹೊರಬರಲಾರದೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

Must Read