September 25, 2026
Friday, September 25, 2026
spot_img

ದೆಹಲಿಯಲ್ಲಿ ಭೀಕರ ದುರಂತ: ಎಸಿ ಸ್ಫೋಟಗೊಂಡು ಸಿಸಿಐ ಮಾಜಿ ಅಧ್ಯಕ್ಷ ಧನೇಂದ್ರ ಕುಮಾರ್ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಮನೆಯಲ್ಲಿ ಏರ್ ಕಂಡೀಷನರ್ ಸ್ಫೋಟಗೊಂಡ ಪರಿಣಾಮ, ಭಾರತೀಯ ಸ್ಪರ್ಧಾ ಆಯೋಗದ ಮೊದಲ ಅಧ್ಯಕ್ಷ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಧನೇಂದ್ರ ಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ದುರದೃಷ್ಟಕರ ಘಟನೆಯಲ್ಲಿ ಅವರ ಪುತ್ರನಿಗೂ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ನಡೆದ ದುರಂತ:

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ದೆಹಲಿಯ ಪ್ರತಿಷ್ಠಿತ ಹೌಜ್‌ಖಾಸ್ ಪ್ರದೇಶದಲ್ಲಿರುವ ಧನೇಂದ್ರ ಕುಮಾರ್ ಅವರ ನಿವಾಸದಲ್ಲಿ ಗುರುವಾರ ತಡರಾತ್ರಿ ಸುಮಾರು 11:18 ರ ವೇಳೆಗೆ ಈ ಘಟನೆ ನಡೆದಿದೆ. ಎಸಿ ಸ್ಫೋಟಗೊಂಡ ಸಮಯದಲ್ಲಿ ಮನೆಯಲ್ಲಿ ಧನೇಂದ್ರ ಕುಮಾರ್, ಅವರ ಪುತ್ರ, ಕುಟುಂಬದ ಇತರ ಸದಸ್ಯರು ಹಾಗೂ ಮನೆ ಕೆಲಸದವರು ಸೇರಿ ಒಟ್ಟು ಐದು ಜನರಿದ್ದರು ಎನ್ನಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು:

ಎಸಿ ಬ್ಲಾಸ್ಟ್‌ನಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಧನೇಂದ್ರ ಕುಮಾರ್ ಮತ್ತು ಅವರ ಪುತ್ರನನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಧನೇಂದ್ರ ಕುಮಾರ್ ಅವರಿಗೆ ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಅದೃಷ್ಟವಶಾತ್, ಅವರ ಪುತ್ರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ತನಿಖೆ:

ಇನ್ನು ಈ ದುರಂತದ ಹಿಂದೆ ಯಾವುದೇ ರೀತಿಯ ಕ್ರಿಮಿನಲ್ ಪಿತೂರಿ ಅಥವಾ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಎಸಿ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಪಘಾತ ಎಂದು ಅಂದಾಜಿಸಲಾಗಿದೆ.

Must Read