August 3, 2026
Monday, August 3, 2026
spot_img

ಗಾಯಗಳ ಸರಣಿಯಿಂದ ಬಿಸಿಸಿಐಗೆ ತಲೆನೋವು: ಟೀಮ್ ಇಂಡಿಯಾ ಫಿಸಿಯೋಗೆ ಗೇಟ್​ಪಾಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ತಂಡದಲ್ಲಿ ಗಾಯಗಳ ಸಮಸ್ಯೆ ನಿರಂತರವಾಗಿ ಹೆಚ್ಚುತ್ತಿರುವ ಬೆನ್ನಲ್ಲೇ ಬಿಸಿಸಿಐ ತಂಡದ ಬೆಂಬಲ ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಲು ಮುಂದಾಗಿದೆ ಎನ್ನಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಪ್ರಮುಖ ಆಟಗಾರರು ಪದೇಪದೇ ಗಾಯಗೊಂಡಿರುವುದು ತಂಡದ ಸಮತೋಲನದ ಮೇಲೂ ಪರಿಣಾಮ ಬೀರಿದೆ. ಈ ಬೆಳವಣಿಗೆಗಳ ನಡುವೆ ಮುಖ್ಯ ಫಿಸಿಯೋ ಕಮಲೇಶ್ ಜೈನ್ ಅವರ ಕಾರ್ಯಕ್ಷಮತೆಯೂ ಪರಿಶೀಲನೆಯ ವ್ಯಾಪ್ತಿಗೆ ಬಂದಿರುವುದಾಗಿ ವರದಿಗಳು ತಿಳಿಸಿವೆ.

ಆಟಗಾರರ ಗಾಯಗಳು ಹೆಚ್ಚಳ

ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಆಟಗಾರರು ಇತ್ತೀಚಿನ ತಿಂಗಳುಗಳಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಭಾರತ ತಂಡವು ಪೂರ್ಣ ಸಾಮರ್ಥ್ಯದ ಪ್ಲೇಯಿಂಗ್ ಇಲೆವೆನ್‌ ಕಣಕ್ಕಿಳಿಸುವಲ್ಲಿ ಪದೇಪದೇ ಸವಾಲು ಎದುರಿಸುತ್ತಿದೆ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಇತ್ತೀಚಿನ ಸೋಲುಗಳ ಬಳಿಕ ಈ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಫಿಸಿಯೋ ಕಾರ್ಯದ ಮೇಲೆ ಪರಿಶೀಲನೆ?

ವರದಿಗಳ ಪ್ರಕಾರ, 2022ರಿಂದ ಭಾರತ ತಂಡದ ಮುಖ್ಯ ಫಿಸಿಯೋ ಆಗಿರುವ ಕಮಲೇಶ್ ಜೈನ್ ಅವರ ಕಾರ್ಯವೈಖರಿ ಬಗ್ಗೆ ತಂಡದ ಆಡಳಿತ ಮಂಡಳಿ ಪ್ರತಿಕ್ರಿಯೆ ಪಡೆಯುವ ಸಾಧ್ಯತೆ ಇದೆ. ನಾಯಕ ಶುಭ್ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಆಟಗಾರರ ಗಾಯಗಳ ಹೆಚ್ಚಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಗಾಯದಿಂದ ಚೇತರಿಸಿಕೊಂಡ ಆಟಗಾರರನ್ನು ಪೂರ್ಣ ಫಿಟ್ನೆಸ್ ಇಲ್ಲದೇ ತಂಡಕ್ಕೆ ಮರಳಿಸಲಾಗಿದೆಯೇ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.

ಟಿ. ದಿಲೀಪ್ ಭಾವನಾತ್ಮಕ ವಿದಾಯ

ಇದರ ನಡುವೆಯೇ ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಐದು ವರ್ಷದ ಸೇವೆಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಅವರು, ಭಾರತ ತಂಡದೊಂದಿಗೆ ಕಳೆದ ಅವಧಿ ತಮ್ಮ ಜೀವನದ ಅತ್ಯಂತ ವಿಶೇಷ ಅಧ್ಯಾಯ ಎಂದು ತಿಳಿಸಿದ್ದಾರೆ. 2021ರಲ್ಲಿ ತಂಡ ಸೇರಿದ್ದ ಅವರ ಒಪ್ಪಂದವನ್ನು ಬಿಸಿಸಿಐ ನವೀಕರಿಸಿಲ್ಲ. ಅವರ ಸ್ಥಾನಕ್ಕೆ ಶುಭದೀಪ್ ಘೋಷ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದ್ದು, ಶ್ರೀಲಂಕಾ ವಿರುದ್ಧದ ಸರಣಿಯಿಂದ ಅವರು ತಂಡದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !