June 23, 2026
Tuesday, June 23, 2026
spot_img

ಯುರೋಪ್‌ನಲ್ಲಿ ದಾಖಲೆಯ ಬಿಸಿಗಾಳಿ: ಫ್ರಾನ್ಸ್, ಬ್ರಿಟನ್‌ನಲ್ಲಿ 40 ಡಿಗ್ರಿ ದಾಟಿದ ತಾಪಮಾನ, ಹೈ ಅಲರ್ಟ್ ಘೋಷಣೆ!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಫ್ರಾನ್ಸ್ ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಹವಾಮಾನ ವೈಪರೀತ್ಯ ಎದುರಾಗಿದೆ. ಇಂದು ಬೆಳಿಗ್ಗೆ ಲಕ್ಷಾಂತರ ಜನರು ತೀವ್ರವಾದ ಬೆವರಿನೊಂದಿಗೆ ಎಚ್ಚರಗೊಂಡಿದ್ದು, ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗಡಿ ದಾಟಿದೆ. ಫ್ರಾನ್ಸ್‌ನ ರಾಷ್ಟ್ರೀಯ ಹವಾಮಾನ ಸಂಸ್ಥೆಯಾದ ‘ಮೆಟಿಯೋ ಫ್ರಾನ್ಸ್’, ದೇಶದ ಒಟ್ಟು ವಿಭಾಗಗಳ ಪೈಕಿ ಅರ್ಧದಷ್ಟು ಭಾಗವನ್ನು ಅಂದರೆ 54 ಇಲಾಖೆಗಳನ್ನು ಅತ್ಯಂತ ಅಪಾಯಕಾರಿ ‘ರೆಡ್ ಹೀಟ್ ವೇವ್ ಅಲರ್ಟ್’ ಅಡಿಯಲ್ಲಿ ಇರಿಸಿದೆ.

5 ದಿನಗಳಲ್ಲಿ 40 ಯುವಕರ ದಾರುಣ ಸಾವು:

ಬಿಸಿಲಿನ ತಾಪ ತಾಳಲಾರದೆ ನದಿ, ಕೆರೆ ಹಾಗೂ ಸಮುದ್ರಗಳಲ್ಲಿ ಈಜಲು ಹೋದ 40 ಯುವಕರು ಕಳೆದ ಗುರುವಾರದಿಂದೀಚೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವತ್ರಿಕವಾಗಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಈ ದೇಶದಲ್ಲಿ ಸದ್ಯ ಶಾಲೆಗಳು, ರೈಲು ಸಂಚಾರ ಮತ್ತು ಕ್ರೀಡಾಕೂಟಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

2003 ರ ಭೀಕರ ಅವಘಡದ ನೆನಪು:

ಪ್ರಸ್ತುತ ಪರಿಸ್ಥಿತಿಯನ್ನು ಆಗಸ್ಟ್2003 ರ ಭೀಕರ ಬಿಸಿಗಾಳಿಗೆ ಹೋಲಿಸಲಾಗುತ್ತಿದೆ. ಆ ವರ್ಷ ಯುರೋಪ್‌ನಲ್ಲಿ ಉಂಟಾಗಿದ್ದ ಅತಿಯಾದ ತಾಪಮಾನದಿಂದಾಗಿ ಸುಮಾರು 15000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಹಗಲು ರಾತ್ರಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದುವರೆಗೆ ದಾಖಲಾದ ಎಲ್ಲಾ ಸಾರ್ವಕಾಲಿಕ ದಾಖಲೆಗಳನ್ನು ಈ ಬಿಸಿಲು ಮುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬ್ರಿಟನ್‌ನಲ್ಲೂ ತಾಪಮಾನ ಏರಿಕೆ:

ಇತ್ತ ಬ್ರಿಟನ್‌ನಲ್ಲೂ ಹವಾಮಾನ ಇಲಾಖೆ ಬುಧವಾರ ಮತ್ತು ಗುರುವಾರಕ್ಕೆ ‘ರೆಡ್ ಎಕ್ಸ್‌ಟ್ರೀಮ್ ಹೀಟ್ ವಾರ್ನಿಂಗ್’ ನೀಡಿದೆ. ದಕ್ಷಿಣ ಇಂಗ್ಲೆಂಡ್‌ನಲ್ಲಿ ತಾಪಮಾನವು 37°C  ಗೆ ಏರಲಿದ್ದು, ಗರಿಷ್ಠ ತಾಪಮಾನ 39°C ತಲುಪುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ;

ಹವಾಮಾನ ಬದಲಾವಣೆಯ ಕಂಟಕ:

ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆ ಹಾಗೂ ಇಯು ಮಾನಿಟರಿಂಗ್ ಏಜೆನ್ಸಿ ಪ್ರಕಾರ, ಯುರೋಪ್ ವಿಶ್ವದಲ್ಲೇ ಅತಿ ವೇಗವಾಗಿ ಕಾಯುತ್ತಿರುವ ಖಂಡವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಯುರೋಪ್ ಖಂಡದಲ್ಲಿ ಬಿಸಿಲಿನ ಬೇಗೆಯಿಂದಲೇ 2ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಾನವ ನಿರ್ಮಿತ ಹವಾಮಾನ ವೈಪರೀತ್ಯವೇ ಇದಕ್ಕೆ ಮುಖ್ಯ ಕಾರಣವಾಗಿದ್ದು, ಮುಂದಿನ 5 ವರ್ಷಗಳಲ್ಲಿ ಭೂಮಿಯ ತಾಪಮಾನ ಇನ್ನಷ್ಟು ಭೀಕರ ದಾಖಲೆಗಳನ್ನು ಸೃಷ್ಟಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !