Sunday, July 3, 2022

Latest Posts

ಅಪ್ಘಾನಿಸ್ತಾನದ ಗುರುದ್ವಾರದ ಮೇಲೆ ಭಯೋತ್ಪಾದಕ ದಾಳಿ : ಇಬ್ಬರ ಸಾವು, ಏಳುಜನರಿಗೆ ತೀವ್ರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಪ್ಘಾನಿಸ್ತಾನದ ಕಾಬೂಲ್‌ ನ ಬಾಗ್-ಎ ಬಾಲಾ ಬಳಿಯಿರುವ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ಶನಿವಾರ  ಉಗ್ರರು ದಾಳಿ ನಡೆಸಿದ್ದಾರೆ. ಗುರುದ್ವಾರದ ಹಲವೆಡೆ ಸ್ಫೋಟ ಸಂಭವಿಸಿದ್ದು ಗುಂಡಿನ ದಾಲಿಯೂ ನಡೆದಿದೆ. ಘಟನೆಯಲ್ಲಿ ಒಬ್ಬ ಸಿಖ್‌ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸ್ಫೋಟಕಗಳನ್ನು ತುಂಬಿಕೊಂಡ ಇನ್ನೊಂದು ವಾಹನ ಗುರುದ್ವಾರದ ಬಳಿ ಸಾಗುತ್ತಿತ್ತು. ಆದರೆ ಅಪ್ಘನ್‌ ರಕ್ಷಣಾ ಪಡೆಗಳು ಅದನ್ನು ಮಾರ್ಗಮಧ್ಯದಲ್ಲೇ ತಡೆದು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಭಯೋತ್ಪಾದಕರು ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ಗುಂಡಿನ ಚಕಮಕಿ ಹಲವಾರು ಗಂಟೆಗಳ ಕಾಲ ನಡೆಯಿತು ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ.

ಸಿಖ್ ಸಮುದಾಯದ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಗುರುದ್ವಾರ ಕಾರ್ಟೆ ಪರ್ವಾನ್‌ನಿಂದ ಸುರಕ್ಷಿತವಾಗಿ ಹೊರತರಲಾಗಿದೆ. ಮೂಲಗಳ ಪ್ರಕಾರ, ಪುಸ್ತಕವನ್ನು ಉಳಿಸಲು ಬೆಂಕಿ ಹೊತ್ತಿಕೊಂಡಿದ್ದ ಗುರುದ್ವಾರ ಆವರಣವನ್ನು ಆಫ್ಘನ್ ಸಿಖ್ಖರು ಪ್ರವೇಶಿಸಿ ಪವಿತ್ರ ಗ್ರಂಥವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತವು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು ಸಿಖ್ಖರ ಪರವಾಗಿ ನಿಂತಿದೆ. “ಗುರುದ್ವಾರ ಕರ್ತೆ ಪರ್ವಾನ್ ಮೇಲಿನ ಹೇಡಿತನದ ದಾಳಿಯನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕು. ದಾಳಿಯ ಸುದ್ದಿ ಬಂದ ನಂತರ ನಾವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ಮೊದಲ ಮತ್ತು ಅಗ್ರಗಣ್ಯ ಕಾಳಜಿ ಸಮುದಾಯದ ಕಲ್ಯಾಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಹೇಳಿದ್ದಾರೆ.

ಕಾಬೂಲ್‌ನ ಗುರುದ್ವಾರದ ಮೇಲಿನ ದಾಳಿಯ ನಂತರ 100 ಕ್ಕೂ ಹೆಚ್ಚು ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳಿಗೆ ಭಾರತವು ಆದ್ಯತೆಯ ಆಧಾರದ ಮೇಲೆ ಇ-ವಿಸಾವನ್ನು ನೀಡಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss